ಭತ್ತ ನಾಟಿ ವಿಚಾರದಲ್ಲಿ ಬಿಜೆಪಿ ಗೇಲಿ ಮಾಡುತ್ತಿರುವುದು ಎಚ್ಡಿಕೆಯನ್ನಲ್ಲ ರೈತರನ್ನು ಎಂದ ವಿಶ್ವನಾಥ್​ 

ಮೈಸೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಮಂಡ್ಯದ ಸೀತಾಪುರದಲ್ಲಿ ಕೈಗೊಂಡಿರುವ ಭತ್ತ ನಾಟಿ ಕಾರ್ಯಕ್ರಮವನ್ನು ಟೀಕೆ ಮಾಡಿರುವ ಬಿಜೆಪಿಯ ವಿರುದ್ಧ ಜೆಡಿಎಸ್​ ಮುಖಂಡರು ತಿರುಗಿಬಿದ್ದಿದ್ದಾರೆ.

“ರೈತರ ಬಗ್ಗೆ ಬಿಜೆಪಿಗೆ ಅರ್ಥವಾಗುವುದಿಲ್ಲ,” ಎಂದು ಜೆಡಿಎಸ್​ ರಾಜ್ಯಾಧ್ಯಾಕ್ಷ ವಿಶ್ವನಾಥ್​ ಬಿಜೆಪಿ ನಾಯಕರನ್ನು ಮೈಸೂರಿನಲ್ಲಿ ತರಾಟೆಗೆ ತೆಗೆದುಕೊಂಡಿದ್ದರೆ, ಇನ್ನೊಂದೆಡೆ,”ಮಣ್ಣಿನ ಮಗ ನಾಟಿ ಮಾಡದೇ ಬಿಜೆಪಿಯವರಂತೆ ಕ್ಲಬ್​ನಲ್ಲಿ ಡ್ಯಾನ್ಸ್​ ಮಾಡಲು ಆಗುತ್ತದೆಯೇ, ಅಥವಾ ಬಿಜೆಪಿಯವರಂತೆ ಬ್ಲೂ ಫಿಲಂ ನೋಡಲು ಆಗುತ್ತದೆಯೇ” ಎಂದು ಪರಿಷತ್​ ಸದಸ್ಯ ಧರ್ಮೇಗೌಡ ಚಿಕ್ಕಮಗಳೂರಿನಲ್ಲಿ ಕಿಡಿ ಕಾರಿದ್ದಾರೆ.

ಭತ್ತ ನಾಟಿ ಕಾರ್ಯಕ್ರಮವನ್ನು ಬಿಜೆಪಿ ಟೀಕಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್​ ಶೆಟ್ಟರ್​, ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಸಾಲಮನ್ನಾ ಯಾವಾಗ ಎಂದು ಪ್ರಶ್ನಿಸಿ, ಭತ್ತ ನಾಟಿ ಕಾರ್ಯವೆಲ್ಲ ಪ್ರಚಾರಕ್ಕೆ ಮಾಡುತ್ತಿರುವ ಕೆಲಸಗಳು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಇಬ್ಬರೂ ನಾಯಕರು ಇಂದು ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

ಬಿಜೆಪಿಯವರಿಗೆ ರೈತರು ಅರ್ಥ ಆಗುವುದಿಲ್ಲ, ಮೋದಿ ಅವರಿಗೆ ರೈತನ ಬಗ್ಗೆ ಗೊತ್ತಾಗುವುದಿಲ್ಲ. ಅವರಿಗೇ ಏನಿದ್ದರೂ ಅದಾನಿ, ಅಂಬಾನಿ ಮಾತ್ರ ಗೊತ್ತು. ಈಶ್ವರಪ್ಪನವರು ಸಿಎಂ ನಾಟಿ ಕಾರ್ಯವನ್ನು ವ್ಯಂಗ್ಯ ಮಾಡಬಾರದು. ಅವರು ವ್ಯಂಗ್ಯ ಮಾಡುತ್ತಿರುವುದು ಸಿಎಂ ಅವರನ್ನಲ್ಲ, ಬದಲಿಗೆ ರೈತ ಸಮೂಹವನ್ನು. ಎಲ್ಲದಕ್ಕೂ ವ್ಯಂಗ್ಯ, ಟೀಕೆ ಮಾಡಬಾರದು. ಬಳಸುವ ಭಾಷೆ ಬಗ್ಗೆ ಎಚ್ಚರ ಇರಬೇಕು. ತಮಿಳುನಾಡಿನ ರಾಜಕಾರಣಿಗಳು ಗೌರವಯುತ ಭಾಷೆ ಬಳಸಿ ಟೀಕೆ ಮಾಡುತ್ತಾರೆ. ರಾಜ್ಯದ ರಾಜಕಾರಣಿಗಳು ಕನ್ನಡವನ್ನು ಅತಿಯಾಗಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ವಿಶ್ವನಾಥ ಅಸಮಾಧಾನ ವ್ಯಕ್ತಪಡಿಸಿದರು.