ಗಣಿಗಾರಿಕೆ ಬಗ್ಗೆ ದೇವೇಗೌಡರ ಮೌನವೇಕೆ ?

ಪಾಂಡವಪುರ/ಕೆ.ಆರ್.ಎಸ್: ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆ.ಆರ್.ಎಸ್.ಗೆ ಅಪಾಯವಿದೆ ಎಂಬ ಅರಿವಿದ್ದರೂ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮೌನವಾಗಿರಲು ಕಾರಣವೇನು ಎಂದು ಸ್ವಾತಂತ್ರೃಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪ್ರಶ್ನಿಸಿದರು.
ಕೆಆರ್‌ಎಸ್ ಬೃಂದಾವನದ ಪ್ರವಾಸಿಗರ ದ್ವಾರದ ಬಳಿ ಆಯೋಜಿಸಿದ್ದ ಗಣಿಗಾರಿಕೆ ನಿಲ್ಲಿಸಿ. ಡಿಸ್ನಿಲ್ಯಾಂಡ್ ಯೋಜನೆ ಕೈಬಿಡಿ. ಕೆಆರ್‌ಎಸ್ ಉಳಿಸಿ ಜನಾಂದೋಲನ ಚಾಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ದೇವೇಗೌಡರೇ ರಾಜಕಾರಣ ಮಾಡಿ, ಬೇಡ ಎನ್ನುವುದಿಲ್ಲ. ಬಳ್ಳಾರಿ ಗಣಿಗಾರಿಕೆ ಬಗೆಯಂತೂ ತುಟಿ ಬಿಚ್ಚಲಿಲ್ಲ. ಆದರೆ, ಲಕ್ಷಾಂತರ ರೈತರ ಜೀವನಾಡಿಯಾಗಿರುವ ಕನ್ನಂಬಾಡಿ ಅಣೆಕಟ್ಟೆಗೆ ಗಣಿಗಾರಿಕೆಯಿಂದ ಅಪಾಯವಿದೆ .ಇಂತಹ ಸಂದರ್ಭದಲ್ಲಾದರೂ ಕಣ್ತೆರೆದು ನೋಡಿ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಸುತ್ತಿರುವ ನಿಮ್ಮ ಪಕ್ಷದವರೇ ಆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಬುದ್ಧಿ ಹೇಳಿ ಎಂದು ಸಲಹೆ ನೀಡಿದರು.
ಕನಕಪುರದಲ್ಲಿ ಡಿ.ಕೆ.ಶಿವಕುಮಾರ್, ಬೇಬಿ ಬೆಟ್ಟದಲ್ಲಿ ತಮ್ಮದೆ ಪಕ್ಷದ ಸಚಿವರು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬನ್ನೇರು ಘಟ್ಟದಲ್ಲಿ ವನ್ಯ ಜೀವಿ ಪರಿಸರದಲ್ಲೂ ಎಗ್ಗಿಲ್ಲದೆ ಗಣಿಗಾರಿಕೆ ನಡೆಯುತ್ತಿದೆ. ದೇವರು ಭೂಮಿಯೊಳಗೆ ನಿಕ್ಷೇಪ ಇಟ್ಟಿದ್ದಾನೆ. ಇದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೇರಿದ್ದು, ಸ್ವಾರ್ಥಕ್ಕಾಗಿ ಇಂದೇ ಎಲ್ಲವನ್ನೂ ಖಾಲಿ ಮಾಡಿದರೆ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳೆ ನಿಮಗೆ ಶಾಪ ಹಾಕುತ್ತಾರೆ. ಸರ್ಕಾರಗಳು ದುಷ್ಟರು ಮತ್ತು ಹಣವಂತರಿಗೆ ಪ್ರಾಕೃತಿಕ ಸಂಪತ್ತನ್ನು ದೋಚಲು ಅವಕಾಶ ಮಾಡಿಕೊಟ್ಟಿವೆ. ಹೀಗಾಗಿಯೇ ಶೇ33 ರಷ್ಟಿದ್ದ ಅರಣ್ಯ ಈಗ ಕೇವಲ ಶೇ.17ಕ್ಕೆ ಇಳಿದಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಬೇರೆ ಬೇರೆ ಪ್ರಾಂತ್ಯಗಳಿಂದ ದುಷ್ಟರು ಬಂದು ಸಾರ್ವಭೌಮರಾಗುತ್ತಿದ್ದಾರೆ. ಸಾಮಾನ್ಯರು ಬದುಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಸಾವು, ನೋವು ನೋಡಿದರೆ ಪ್ರಳಯ ಸಂಭವಿಸುತ್ತದೇನೊ ಎಂದು ಭಾಸವಾಗುತ್ತಿದೆ. ಬೇಡದ ಯೋಜನೆಗಳಿಗೆ ಕೋಟಿಗಟ್ಟಲೆ ಹಣ ನೀಡುವ ಸರ್ಕಾರ ಉತ್ತಮ ರಸ್ತೆ ನಿರ್ಮಿಸಿ ಅಪಘಾತ ತಡೆಗಟ್ಟಲು ಸಾಧ್ಯವಾಗಿಲ್ಲ ಎಂದು ದೂರಿದರು.

ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ : ರಾಜ್ಯದಲ್ಲಿನ ಅನಾಯಕತ್ವದಿಂದ ಶಾಂತಿ, ನೆಮ್ಮದಿ ಹಾಳಾಗಿದೆ. ದುಷ್ಟರು ಮತ್ತು ಗೂಂಡಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ರೈತರ ಸಾಲ ಮನ್ನಾ ವಿಚಾರ ಮಾತನಾಡುತ್ತೀರಿ ಸಂತೋಷ. ಆದರೆ, ಕನ್ನಂಬಾಡಿ ಅಣೆಕಟ್ಟೆಯನ್ನೆ ನಂಬಿಕೊಂಡು ಲಕ್ಷಾಂತರ ರೈತರು ಜೀವನ ನಡೆಸುತ್ತಿದ್ದಾರೆ .ಇದು ನಿಮ್ಮ ಗಮನಕ್ಕೆ ಬಂದಿಲ್ಲವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರನ್ನು ಪ್ರಶ್ನಿಸಿದರು.
ಅಪ್ರಯೋಜಕ ಯೋಜನೆಗಳಿಗೆ ಸರ್ಕಾರದ ಕೋಟಿ ಕೋಟಿ ಅನುದಾನ ನೀಡಿ ಅದರಿಂದ ಬರುವ ಕಮೀಷನ್ ಹಣದಿಂದ ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿದ್ದೀರಾ ಎಂದು ಡಿಸ್ನಿಲ್ಯಾಂಡ್ ನಿರ್ಮಾಣ ನಿರ್ಧಾರದ ಬಗ್ಗೆ ಕಿಡಿಕಾರಿದರು.

ಕೆ.ಆರ್. ಪೇಟೆಯಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಕ್ರಮ ಗಣಿಗಾರಿಕೆ ಪ್ರದೇಶದ ವೀಕ್ಷಣೆಗೆ ಹೋದರೆ ದೇವೇಗೌಡರ ಕಡೆಯವರು ಹೋಗಿ ಅಡ್ಡಿಪಡಿಸಿ ಗಲಾಟೆ ಎಬ್ಬಿಸುತ್ತಾರೆ. ಅಧಿಕಾರಿಗಳು ಪರ್ಮಿಷನ್ ಕೊಟ್ಟಿದ್ದಾರೆ . ನಾವು ಗಣಿಗಾರಿಕೆ ನಡೆಸುತ್ತಿದ್ದೇವೆ ಎನ್ನುತ್ತಾರೆ. ಸರ್ಕಾರ ಮತ್ತು ಅಧಿಕಾರಿಗಳು ಲೂಟಿ ಮಾಡಲು ಇಂತಹವರನ್ನು ಬಿಟ್ಟಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.