ಕುಮಾರಸ್ವಾಮಿಯವರಿಗೆ ಅಯೋಗ್ಯ ಸಿಎಂ ಎಂದು ಹೇಳಿದ್ದನ್ನು ವಾಪಸ್​ ಪಡೆಯುತ್ತೇನೆ ಎಂದ್ರು ಕೆ.ಎಸ್​.ಈಶ್ವರಪ್ಪ

ಬಾಗಲಕೋಟೆ: ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್​ ಮುಗಿಸಿ ಆಯಿತು. ಈಗ ಜೆಡಿಎಸ್​ ಮುಗಿಸಲು ಹೊರಟಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿ, ಜೆಡಿಎಸ್​, ಕಾಂಗ್ರೆಸ್​ನಿಂದ ಮೈತ್ರಿ ಎಂಬ ಪದವೇ ಅಪವಿತ್ರವಾಗಿದೆ. ಸ್ನೇಹದ ಅರ್ಥವೇ ಅವರಿಗೆ ಗೊತ್ತಿಲ್ಲ ಎಂದರು.

ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಹೇಳಿಕೆಗಳು ಹಾಸ್ಯಾಸ್ಪದ ಎನಿಸುತ್ತವೆ. ಐಟಿ ದಾಳಿ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಾರೆ. ಅಂದರೆ ಅದರ ಆಶಯ ಕಳ್ಳರೆಲ್ಲ ತಪ್ಪಿಸಿಕೊಳ್ಳಲಿ ಎಂದಾಗಿರುತ್ತದೆ. ಹಾಗೇ ಪುಲ್ವಾಮಾ ದಾಳಿ ಬಗ್ಗೆಯೂ ಗೊತ್ತಿತ್ತು ಎನ್ನುತ್ತಾರೆ. ಗೊತ್ತಿದ್ದರೆ ಹೇಳಬೇಕಿತ್ತು. ಎರಡು ವರ್ಷ ಏನು ಮಾಡುತ್ತಿದ್ದಿರಿ? ಹೇಳಬಹುದಿತ್ತಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅಯೋಗ್ಯ ಸಿಎಂ ಎಂದು ಕರೆದಿದ್ದೆ. ಆ ಪದ ಬಳಸಿದ್ದರಿಂದ ಅವರಿಗೆ ನೋವಾಗಿದೆ. ಹಾಗಾಗಿ ಈಗ ಅವರಿಗೆ ಯೋಗ್ಯತೆಯಿಲ್ಲ ಎನ್ನುತ್ತೇನೆ. ಅಯೋಗ್ಯನಲ್ಲ, ಯೋಗ್ಯತೆಯಿಲ್ಲ ಅಷ್ಟೇ ಎಂದು ಹೇಳಿದರು.
ಆರ್​ಎಸ್​ಎಸ್​ನವರಿಂದ ಲೋಕಸಭಾ ಟಿಕೆಟ್​ ಮಾರಾಟ ಎಂದು ಹೇಳಿದ ದಿನೇಶ್​ ಗುಂಡೂರಾವ್​ಗೆ ಪ್ರತಿಕ್ರಿಯೆ ನೀಡಿದ ಅವರು, ದಿನೇಶ್​ ಗುಂಡೂರಾವ್​ ಅವರು ತುಂಬ ಕೀಳಾಗಿ ಮಾತನಾಡುತ್ತಿದ್ದಾರೆ. ಆರ್​ಎಸ್​ಎಸ್​ ಬಗ್ಗೆ ಟೀಕಿಸಿದರೆ ಬಹಳ ಮೇಲಿನ ಸ್ಥಾನಕ್ಕೆ ಹೋಗಬಹುದು ಎಂದುಕೊಂಡಿದ್ದಾರೆ. ಆಗ ಸಿದ್ದರಾಮಯ್ಯನವರೂ ನಾನು ಆರ್​ಎಸ್​ಎಸ್ ಬೆಳೆಯಲು ಬಿಡುವುದಿಲ್ಲ ಎಂದರು. ಇಂದಿರಾಗಾಂಧಿ, ನೆಹರೂ ಕೂಡ ಅದನ್ನೇ ಹೇಳಿದರು. ಆದರೆ ನೂರು ಸಿದ್ದರಾಮಯ್ಯ, ಸಾವಿರ ಗುಂಡೂರಾವ್​ ಬಂದರೂ ಆರ್​ಎಸ್​ಎಸ್​ಗೆ ಏನೂ ಮಾಡಲೂ ಆಗುವುದಿಲ್ಲ ಎಂದರು.

Leave a Reply

Your email address will not be published. Required fields are marked *