ಕಾಟಾಚಾರಕ್ಕಾಗಿ ನಾನು ಜನತಾ ದರ್ಶನ ಮಾಡಲ್ಲ: ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: ನಾನು ಕಾಟಾಚಾರಕ್ಕಾಗಿ ಜನತಾದರ್ಶನ ಮಾಡಲ್ಲ. ಬೆಳಗ್ಗೆಯಿಂದ ತಡರಾತ್ರಿವರೆಗೂ ಜನತಾದರ್ಶನ ಮಾಡಿ ಹಲವು ಸಮಸ್ಯೆಗಳನ್ನ ಸ್ಥಳದಲ್ಲಿಯೇ ಬಗೆಹರಿಸಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಲಮನ್ನಾ ಆದರೂ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ. ದುಡುಕಿ ನಿರ್ಧಾರ ಕೈಗೊಂಡು ಕುಟುಂಬ ಬೀದಿಗೆ ತರಬೇಡಿ. ದೇವರಾಜು ಅರಸು ತಂದಿದ್ದ ಕ್ರಾಂತಿಕಾರಿ ಯೋಜನೆ ಜಾರಿ ಮಾಡಿದ್ದೇನೆ. ಸರ್ಕಾರಕ್ಕೆ ನಿಮ್ಮ ಬೆಂಬಲವೇ ಶ್ರೀರಕ್ಷೆ ಎಂದು ರೈತರಲ್ಲಿ ಮನವಿ ಮಾಡಿದರು.

ನಿಮ್ಮ ತೆರಿಗೆ ಹಣ ಪೋಲು ಮಾಡದೇ ಜನರ ಕೆಲಸ ಮಾಡುತ್ತೇವೆ. ಬೆಂಗಳೂರಲ್ಲಿ ಅಪರಾಧ ನಿಯಂತ್ರಣಕ್ಕೆ ಒಳ್ಳೆಯ ಅಧಿಕಾರಿಗಳನ್ನು ತಂದಿದ್ದೇವೆ. ಒಂದು-ಎರಡು ಗಂಟೆವರೆಗೂ ಪಾಶ್ಚಾತ್ಯ ಬದುಕು ರೂಢಿಸಿಕೊಂಡಿದ್ದಾರೆ. ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ಮಾಡಿದಾಗ ಕೋಟಿ ಕೋಟಿ ಹಣ ಸಿಕ್ಕಿದೆ. ನಾನೇ ಕರೆ ಮಾಡಿದರೂ ನಿಮ್ಮ ನಿರ್ಧಾರದಿಂದ ವಾಪಸ್ ಬರಬೇಡಿ ಎಂದು ಹೇಳಿದ್ದೇನೆ. ನಗರದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಖಡಕ್ ನಿರ್ಧಾರಕ್ಕೆ ಮುಂದಾಗಿದ್ದೇನೆ ಎಂದು ಹೇಳಿದರು.

ಗಾಂಧಿ ಕನಸು ಗ್ರಾಮ ಸ್ವರಾಜ್ಯ ನನಸಾಗಬೇಕು. ಮಧ್ಯರಾತ್ರಿ ಮಹಿಳೆ ನಿರ್ಭಯವಾಗಿ ಓಡಾಡಬೇಕು. ಗಾಂಧಿ ಕನಸಿಗೆ ಸಮ್ಮಿಶ್ರ ಸರ್ಕಾರ ಇದಕ್ಕೆ ಬದ್ಧವಾಗಿದೆ. 365 ದಿನವೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತದೆ. ಗಾಂಧಿ ಸ್ಮಾರಕ ಸೇರಿ ಹಲವು ಕಾರ್ಯಕ್ರಮಗಳನ್ನು ಸರ್ಕಾರದ ಮೂಲಕ ಈ ಬಾರಿ ಹಮ್ಮಿಕೊಳ್ಳುತ್ತೇವೆ. ಪ್ರತಿ ಜಿಲ್ಲೆಯ ಲ್ಲೂ ಗಾಂಧಿ ಭವನ ಕಟ್ಟಲು ನಿರ್ಧರಿಸಲಾಗಿದೆ. ಹಲವಾರು ಭವನ ಕಟ್ಟಿದ್ದೇವೆ. ಅದರ ಪರಿಸ್ಥಿತಿ ಏನಾಗಿದೆ ಎನ್ನುವುದು ನನಗೆ ಗೊತ್ತು. ಗಾಂಧಿ ಭವನದಲ್ಲಿ ದಿನಕೊಂದು ಕಾರ್ಯಕ್ರಮ ನಡೆಯಬೇಕು ಎಂದರು.

ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ವಿಧಾನಸೌಧ ಆವರಣದಲ್ಲಿರುವ ಗಾಂಧಿ, ಶಾಸ್ತ್ರಿ ಪ್ರತಿಮೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಲಾರ್ಪಣೆ ಮಾಡಿದರು. ಸಿಎಂಗೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ್‌ ಸಾಥ್ ನೀಡಿದರು. (ದಿಗ್ವಿಜಯ ನ್ಯೂಸ್)