ಕೆ.ಆರ್​.ಪೇಟೆಯಲ್ಲಿ ಮತ್ತೆ ಕಣ್ಣೀರು ಹಾಕಿದ ಕುಮಾರಸ್ವಾಮಿ: ಈ ಬಾರಿ ಕಣ್ಣಲ್ಲಿ ನೀರು ಬರಲು ಎಚ್​.ವಿಶ್ವನಾಥ್​ ಕಾರಣವಂತೆ

ಮಂಡ್ಯ: ಈಗಾಗಲೇ ದೇವೇಗೌಡರ ಕುಟುಂಬದವರು ಕಣ್ಣೀರು ಹಾಕುವ ವಿಚಾರವಾಗಿ ಹಲವು ಟ್ರೋಲ್​ಗಳು, ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಇಂದು ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ಕೆ.ಆರ್​.ಪೇಟೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಣ್ಣಲ್ಲಿ ನೀರು ಹಾಕಿದ್ದಾರೆ. ಅಲ್ಲದೆ, ಹೌದು ನಾನು ಕಣ್ಣೀರು ಹಾಕುತ್ತೇನೆ, ನನ್ನ ತಂದೆಯೂ ಕಣ್ಣೀರು ಹಾಕುತ್ತಾರೆ ಎಂದು ಹೇಳಿದ್ದಾರೆ.

ಮಾತನಾಡುತ್ತಿದ್ದಾಗ ಭಾವುಕರಾದ ಅವರು, ನಾನು ಕಣ್ಣೀರು ಹಾಕುವುದನ್ನು ನಿಲ್ಲಿಸಿದ್ದೆ. ಆದರೆ ಇವತ್ತು ಎಚ್​. ವಿಶ್ವನಾಥ್​ ಒಂದು ಮಾತು ಹೇಳಿದರು. ಯಾರೂ ನಿನ್ನ ಕಷ್ಟ ಅರ್ಥ ಮಾಡಿಕೊಳ್ಳುವುದಿಲ್ಲ. ನಿನ್ನ ಪರಿಸ್ಥಿತಿಯ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ನಿನ್ನ ಆರೋಗ್ಯದ ಸ್ಥಿತಿ ಬಗ್ಗೆ ಗೊತ್ತಿಲ್ಲ ಎಂದು ನನಗೆ ಹೇಳಿದರು. ಅವರ ಮಾತುಗಳು ನನ್ನ ಮನಸಿನ ಮೇಲೆ ಪರಿಣಾಮ ಬೀರಿದವು. ಹಾಗಾಗಿ ಕಣ್ಣಲ್ಲಿ ನೀರು ಬಂತು ಎಂದು ಹೇಳಿದರು.

ನನಗೆ ರಾಜಕೀಯಕ್ಕೆ ಬರಬೇಕು ಎಂದೇನೂ ಇರಲಿಲ್ಲ. ಶಿಕ್ಷಣ ಮುಗಿಸಿ ಸಿನಿಮಾ ವಿತರಕನಾಗಿ ಕೆಲಸ ಮಾಡುತ್ತಿದ್ದೆ. ಅಚಾನಕ್​ ಆಗಿ ರಾಜಕೀಯಕ್ಕೆ ಬಂದಿದ್ದೇನೆ. ಅಲ್ಲಿಂದ ಇಲ್ಲಿಯವರೆಗೆ ಕಷ್ಟ ಎಂದು ಬಂದವರಿಗೆ ಜಾತಿ, ಧರ್ಮ ಕೇಳದೆ ಸಹಾಯ ಮಾಡಿದ್ದೇನೆ ಎಂದರು.

ನನ್ನ ಜೀವ ಆಗಲೇ ಹೋಗುತ್ತಿತ್ತು
ನಾನು ಎರಡು ಬಾರಿ ಚಿಕಿತ್ಸೆಗೆ ಒಳಗಾಗಿದ್ದೇನೆ. ಇಸ್ರೇಲ್​ಗೆ ಹೋದಾಗಲೇ ನನ್ನ ಜೀವ ಹೋಗಬೇಕಿತ್ತು. ನಾನು ರೈತರಿಗೆ ಒಳ್ಳೆಯದು ಮಾಡಬೇಕು ಮಾತ್ರೆ ಕೊಡಿ ಸಾಕು ಎಂದಿದ್ದೆ. ಆದರೆ ವೈದ್ಯರು ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದರು. ತುಂಬ ಕಷ್ಟಪಟ್ಟಿದ್ದೇನೆ ಎಂದು ನೆನಪಿಸಿಕೊಂಡರು.