ಸುಗನಹಳ್ಳಿಗೆ ಸ್ವಾಮಿದೆಸೆ ಶುರು

ಗದಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹನ್ನೊಂದು ವರ್ಷಗಳ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಶಿರಹಟ್ಟಿ ತಾಲೂಕಿನ ಸುಗನಹಳ್ಳಿಗೆ ಇದೀಗ ಶುಕ್ರದೆಸೆ ಆರಂಭವಾಗಿದೆ. ಗ್ರಾಮದ ಅವ್ಯವಸ್ಥೆ ಕುರಿತು ಇತ್ತೀಚೆಗೆ ‘ದೊರೆಯ ವಾಸ್ತವ್ಯದಿಂದ ದೊರೆಯಲಿಲ್ಲ ನೆಮ್ಮದಿ’ ಶೀರ್ಷಿಕೆಯಡಿ ‘ವಿಜಯವಾಣಿ’ ಪ್ರಕಟಿಸಿದ್ದ ರಿಯಾಲಿಟಿ ಚೆಕ್ ವರದಿ ಹಾಗೂ ‘ದಿಗ್ವಿಜಯ ನ್ಯೂಸ್’ ವಾಹಿನಿಯಲ್ಲಿ ಪ್ರಸಾರವಾದ ವರದಿ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲಾಮಟ್ಟದ ಅಧಿಕಾರಿಗಳು ತುರ್ತು ಸಭೆ ನಡೆಸಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಪಂ ಉಪಕಾರ್ಯದರ್ಶಿ ಎಸ್.ಸಿ. ಮಹೇಶ ನೇತೃತ್ವದ ತಂಡ ಜನರಿಂದ ಅಹವಾಲು ಸ್ವೀಕರಿಸಿದ್ದು, ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದೆ.

ಅಧಿಕಾರಿಗಳು ತುರ್ತಾಗಿ ಆಗಬೇಕಿರುವ ಕಾರ್ಯಗಳ ಪಟ್ಟಿ ಹಾಗೂ ಸರ್ಕಾರದಿಂದ ಹೆಚ್ಚುವರಿ ಅನುದಾನ ಪಡೆದು ಮಾಡುವಂತಹ ಕಾರ್ಯಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಗ್ರಾಮದಲ್ಲಿ ನಿರ್ವಿುಸಲಾಗಿದ್ದ ಶುದ್ಧ ನೀರಿನ ಘಟಕಕ್ಕೆ ಪೈಪ್​ಲೈನ್ ಸಂಪರ್ಕ ನೀಡಲಾಗಿದ್ದು, ನಲ್ಲಿಯಲ್ಲಿ ನೀರು ಬರಲಾರಂಭಿಸಿದೆ. ಫ್ಲೋರೈಡ್ ಮಿಶ್ರಿತ ನೀರು ಕುಡಿದು ವಾರದಲ್ಲಿ ಎರಡು ದಿನ ಆಸ್ಪತ್ರೆಗೆ ಎಡತಾಕುವುದು ತಪ್ಪಿತು ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಾರೆ.

ಬೇಡಿಕೆಗಳೇನು: ಒಂದು ನೀರಿನ ತೊಟ್ಟಿ (ಸಂಪ್) ಇದ್ದು, ಇನ್ನೊಂದು ನೀರಿನ ತೊಟ್ಟಿ ನಿರ್ವಿುಸಲು ಬೇಡಿಕೆ ಇಟ್ಟಿದ್ದು ಅಂದಾಜು ಪಟ್ಟಿ ತಯಾರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಹಳೇ ವಿದ್ಯುತ್ ಕಂಬಗಳನ್ನು ಬದಲಿಸಲು ಹೆಸ್ಕಾಂಗೆ ಸೂಚಿಸಲಾಗಿದೆ. ಗ್ರಾಮಕ್ಕೆ ಸ್ಮಶಾನ, ಉನ್ನತ ದರ್ಜೆಯ ಗ್ರಂಥಾಲಯ, ಗರಡಿಮನೆಗೆ ಜನರು ಬೇಡಿಕೆ ಇಟ್ಟಿದ್ದು, ಈ ಕುರಿತು ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರಿ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ವಿುಸಲಾಗುವುದು. ಹೊಸ ಅಂಗನವಾಡಿ ಕಟ್ಟಡ ನಿರ್ವಿುಸಬೇಕೆಂಬ ಅಹವಾಲು ಸ್ವೀಕೃತಿಯಾಗಿದ್ದು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಡಿಪಿಒ ಅವರಿಗೆ ಪ್ರಸ್ತಾವನೆ ಕಳಿಸಲು ಸೂಚಿಸಲಾಗಿದೆ. ಅಂಗನವಾಡಿ ನಿರ್ವಿುಸುವುದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ಈ ಕೆಲಸ ಕೊಂಚ ತಡವಾಗಬಹುದು. ಹೀಗಾಗಿ ಗ್ರಾಪಂ ಅನುದಾನದಲ್ಲಿ ನಿರ್ವಿುಸಲು ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷರ ಗಮನಕ್ಕೆ ತರುವ ಪ್ರಯತ್ನವನ್ನು ಕೆಳಹಂತದ ಅಧಿಕಾರಿಗಳು ಮಾಡುತ್ತಿದ್ದಾರೆ. ಗ್ರಾಮದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಅಗತ್ಯವಿದ್ದು, ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಗಾಡಗೋಳಿಯಲ್ಲೂ ಅದೇ ಕತೆ ವ್ಯಥೆ!

ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲೂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಸೂರಿನದ್ದೇ ಅಲ್ಲಿನ ಪ್ರಮುಖ ಸಮಸ್ಯೆ. ಗ್ರಾಮದ ಕಡೆಗೆ ಅಧಿಕಾರಿಗಳು ಗಮನ ಹರಿಸಿ ಸೌಕರ್ಯ ನೀಡಲು ಮುಂದಾಗಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.

ಸಮಸ್ಯೆ ಮೇಲೆ ಬೆಳಕು

ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ 2007ರ ಫೆ. 28ರಂದು ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಗನಹಳ್ಳಿ ಗ್ರಾಮದ ಬಸವರಾಜ ಹೊಂಬಾಳಿಮಠ ಅವರ ಮನೆಯಲ್ಲಿ್ಲ ವಾಸ್ತವ್ಯ ಮಾಡಿದ್ದರು. ಸಿಎಂ ಗ್ರಾಮ ವಾಸ್ತವ್ಯದಿಂದ ಇಡೀ ಊರು ಅಭಿವೃದ್ಧಿ ಹೊಂದಲಿದೆ ಎಂದು ಜನರು ಕನಸು ಕಂಡಿದ್ದರು. ಆದರೆ, ಗ್ರಾಮ ವಾಸ್ತವ್ಯ ಬರೀ ಪ್ರಚಾರಕ್ಕೆ ಸೀಮಿತವಾಯಿತು. ಅಭಿವೃದ್ಧಿ ಕನಸಾಗಿಯೇ ಉಳಿದಿತ್ತು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು. ಫ್ಲೋರೈಡ್​ಯುುಕ್ತ ನೀರು ಕುಡಿದ ಗ್ರಾಮದ ಜನರಿಗೆ ಆಗಾಗ ಆರೋಗ್ಯ ಕೈಕೊಡುತ್ತಿತ್ತು. ಗ್ರಾಮದಲ್ಲಿ ವೈದ್ಯರು ಇಲ್ಲ. ರಸ್ತೆಗಳ ಸ್ಥಿತಿ ಅಯೋಮಯ. ಮಳೆ ಶುರುವಾದರೆ ಸಂಚಾರಕ್ಕೆ ಸಂಚಕಾರ. ಎಲ್ಲೆಂದರಲ್ಲಿ ಕಸ ತುಂಬಿರುವುದು… ಹೀಗೆ ಹಲವು ಸಮಸ್ಯೆಗಳ ಮೇಲೆ ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು.

ನೀರಿನ ಘಟಕ ಆರಂಭ

ಗ್ರಾಮದ ಜನರೊಂದಿಗೆ ರ್ಚಚಿಸಿ ಸಮಸ್ಯೆಗಳನ್ನು ಗುರುತಿಸಿ ಪಟ್ಟಿ ಮಾಡಿಕೊಂಡಿದ್ದು, ಈ ಪೈಕಿ ಶುದ್ಧ ನೀರಿನ ಘಟಕ ಈಗಾಗಲೇ ಆರಂಭವಾಗಿದೆ. ಗ್ರಾಮದಲ್ಲಿ ನಾಲ್ಕು ಸಾಮೂಹಿಕ ಶೌಚಗೃಹ ನಿರ್ವಿುಸಬೇಕೆಂದು ಜನರು ಮನವಿ ಮಾಡಿಕೊಂಡಿದ್ದಾರೆ. ಜಾಗದ ಕೊರತೆಯಿಂದ ಸದ್ಯಕ್ಕೆ ಎರಡು ಶೌಚಗೃಹ ನಿರ್ವಿುಸಲು ಸೂಚನೆ ನೀಡಲಾಗಿದೆ. ಇನ್ನೆರಡು ಶೌಚಗೃಹ ನಿರ್ವಣಕ್ಕೆ ಜಾಗ ಪಡೆಯಲು ಚರ್ಚೆ ನಡೆಸಲಾಗುತ್ತಿದೆ. ಜಾಗ ಗುರುತಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡಿದ್ದ ಸುಗನಹಳ್ಳಿ ಗ್ರಾಮದಲ್ಲಿ 10-12 ಪ್ರಮುಖ ಸಮಸ್ಯೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಸದ್ಯ 5ರಿಂದ 6 ಸಮಸ್ಯೆಗಳನ್ನು ಈಗಾಗಲೇ ಪರಿಹರಿಸಲಾಗಿದೆ. ಎಲ್ಲ ಬೇಡಿಕೆಗಳನ್ನು ಶೀಘ್ರ ಈಡೇರಿಸಲಾಗುವುದು. ಶುದ್ಧ ನೀರು ಘಟಕ ಆರಂಭಿಸಲಾಗಿದೆ.

| ಎಸ್.ಸಿ.ಮಹೇಶ ಜಿಪಂ ಉಪಕಾರ್ಯದರ್ಶಿ ಗದಗ


ವಿಜಯವಾಣಿ-ದಿಗ್ವಿಜಯ ಬಳಗಕ್ಕೆ ಸಿಎಂ ಧನ್ಯವಾದ

ಬೆಂಗಳೂರು: ಗ್ರಾಮವಾಸ್ತವ್ಯ ಕಾರ್ಯಕ್ರಮಗಳ ಪರಿಣಾಮ ಮತ್ತು ನಂತರದ ವಸ್ತುಸ್ಥಿತಿ ಬಗ್ಗೆ ವಿಶೇಷ ವರದಿ ಮಾಡಿದ ವಿಜಯವಾಣಿ- ದಿಗ್ವಿಜಯ ವಾಹಿನಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೃತಜ್ಞತೆ ಅರ್ಪಿಸಿದ್ದಾರೆ.

ಮತ್ತೆ ಬನ್ನಿ ಕುಮಾರಸ್ವಾಮಿ ಶೀರ್ಷಿಕೆಯಡಿ ವಿಜಯವಾಣಿ ಅಗ್ರಲೇಖನ ಪ್ರಕಟಿಸಿ, ಜನರ ಭಾವನೆಯನ್ನು ಪ್ರಸ್ತುತಪಡಿಸಿತ್ತು. ಜತೆಗೆ ಕುಮಾರಸ್ವಾಮಿ ಈ ಹಿಂದೆ ಗ್ರಾಮವಾಸ್ತವ್ಯ ಮಾಡಿದ್ದ ಕಡೆಗಳಲ್ಲಿ ಈಗಿನ ಪರಿಸ್ಥಿತಿ ಹೇಗಿದೆ ಎಂಬ ಚಿತ್ರಣ ಕಟ್ಟಿಕೊಟ್ಟಿತ್ತು.

ವರದಿ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಸಿಎಂ, ‘ಗ್ರಾಮವಾಸ್ತವ್ಯ ಮಾಡಿದ್ದ ಕಡೆಗಳಲ್ಲಿನ ಪರಿಸ್ಥಿತಿ ತಿಳಿಸಿಕೊಟ್ಟು ಕಣ್ತೆರೆಸಿಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಅಂದು ಕೆಲವೊಂದು ತಪು್ಪಗಳಾಗಿರಬಹುದು. ಅದನ್ನು ತಿದ್ದಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ’ ಎಂದರು. ಕುಮಾರಸ್ವಾಮಿ ಮತ್ತೆ ಗ್ರಾಮವಾಸ್ತವ್ಯಕ್ಕೆ ಅಣಿಯಾಗುತ್ತಿದ್ದು, ಈ ಹಿಂದೆ ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮಗಳ ಬಗ್ಗೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ರಾಜ್ಯಾದ್ಯಂತ ರಿಯಾಲಿಟ್ ಚೆಕ್ ನಡೆಸಿತ್ತು.

2006 ಮತ್ತು 2007ರ ಆಜುಬಾಜಲ್ಲಿ ಸಿಎಂ ಕುಮಾರ ಸ್ವಾಮಿ ರಾಜ್ಯದ ಜನರ ನೋವು ಸಂಕಟ ಆಲಿಸುವ ಉದ್ದೇಶದಿಂದ ರಾಜ್ಯದ ಮೂಲೆಮೂಲೆಗೂ ಸುತ್ತಲಾರಂಭಿಸಿದರು. ತಿಂಗಳಿಗೊಮ್ಮೆ ಗ್ರಾಮವೊಂದರಲ್ಲಿ ವಾಸ್ತವ್ಯ ಮಾಡಿ ಅಲ್ಲಿನ ಸಮಸ್ಯೆ ಅರಿಯುವುದು ಮತ್ತು ಪರಿಹಾರ ಕೊಡುವುದು ಅವರ ಉದ್ದೇಶವಾಗಿತ್ತು. ಈ ಕಾರ್ಯಕ್ರಮ ರಾಷ್ಟ್ರೀಯ ಮಟ್ಟದಲ್ಲೂ ಸದ್ದುಮಾಡಿತ್ತು.