ನಾಡಿಗೆ ನೀರುಣಿಸುವ ಕೆಆರ್​ಎಸ್​ಗೆ ಧಕ್ಕೆ ತರುವ ಪ್ರಶ್ನೆಯೇ ಇಲ್ಲ: ಸಾಧಕ ಬಾಧಕ ಚರ್ಚಿಸಿಯೇ ಪ್ರತಿಮೆ ನಿರ್ಮಾಣ

ಮಂಡ್ಯ: ಡಿಸ್ನಿಲ್ಯಾಂಡ್​ ಯೋಜನೆಯಿಂದ ಮಂಡ್ಯ ಮತ್ತು ಮೈಸೂರಿನ 50 ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ. ಸಾಧಕ ಬಾಧಕ ಚರ್ಚಿಸಿಯೇ ಯೋಜನೆಯ ಜಾರಿಗೆ ತರುತ್ತೇವೆ. ಈ ವಿಚಾರದಲ್ಲಿ ಜನರಿಗೆ ಯಾವ ಆತಂಕವೂ ಬೇಡ, ಅಪಪ್ರಚಾರವನ್ನೂ ನಂಬಬೇಕಿಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದ ಮೇಲುಕೋಟೆಯಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಸಮಾರಂಭದಲ್ಲಿ ಮಾತನಾಡಿರುವ ಅವರು, ” ಕೆಆರ್​ಎಸ್​ ಬಳಿ ನಿರ್ಮಿಸಲಾಗುತ್ತಿರುವ ಡಿಸ್ನಿಲ್ಯಾಂಡ್​ ಮತ್ತು ಕಾವೇರಿ ಪ್ರತಿಮೆ ವಿಷಯದಲ್ಲಿ ಹಲವರು ಹಲವು ರೀತಿಯ ಚರ್ಚೆ ನಡೆಸುತ್ತಿದ್ದಾರೆ.

ಮೈಸೂರಿನ ಕೆಲ ಎಂಜಿನಿಯರ್​ಗಳು ವಿರೋಧಿಸಿದ್ದಾರೆ. ಜಲಾಶಯಕ್ಕೆ ದಕ್ಕೆಯಾಗಲಿದೆ ಎಂದು ಹೇಳಿದ್ದಾರೆ. ಜಲಾಶಯಕ್ಕೆ ಹಾನಿ ಮಾಡಿ ಏನನ್ನಾದರೂ ಮಾಡಲು ಸಾಧ್ಯವೇ,” ಎಂದು ಅವರು ಯೋಜನೆ ವಿರೋಧಿಸುತ್ತಿರುವವರನ್ನು ಪ್ರಶ್ನಿಸಿದರು.

“ಯೋಜನೆ ವಿರೋಧಿಸುತ್ತಿರುವವರ ಜತೆಗೆ ನಾನೇ ಸಭೆ ಮಾಡುತ್ತೇನೆ. ನಿಮ್ಮ ಬಳಿ ಇರುವ ಮಾಹಿತಿ, ತಾಂತ್ರಿಕ ಅಂಶಗಳನ್ನು ಸಂಗ್ರಹಿಸುತ್ತೇನೆ. ಇದು 2000 ಕೊಟಿ ಕಾರ್ಯಕ್ರಮ. ಮಂಡ್ಯ , ಮೈಸೂರಿನ 50 ಸಾವಿರ ಕುಟುಂಬಕ್ಕೆ ಉದ್ಯೋಗ ಕೊಡುವ ಯೋಜನೆ. ಕಾವೇರಿ ಪ್ರತಿಮೆಯನ್ನು ನಿಲ್ಲಿಸುವುದಷ್ಟೇ ಸರ್ಕಾರದ ಮುಂದಿರುವ ವಿಚಾರವಲ್ಲ,” ಎಂದು ಅವರು ಹೇಳಿದರು.

ಮೈಸೂರು ಅರಸರು ನಿರ್ಮಿಸಿದ ಜಲಾಶಯಕ್ಕೆ ದಕ್ಕೆ ತಂದು ಯೋಜನೆ ರೂಪಿಸಲು ನಾವೇನು ದಡ್ಡರಲ್ಲ. ಎಲ್ಲರ ಒಪ್ಪಿಗೆ ಪಡೆದು, ತಾಂತ್ರಿಕ ಅಂಶಗಳನ್ನು ಪರಿಗಣಿಸಯೇ ಯೋಜನೆ ತರುತ್ತೇವೆ. ಇದರ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ವಿರೋಧ ಮಾಡಬೇಕಿಲ್ಲ. ಕೆಆರ್​ಎಸ್​ ನಾಡಿನ ಜನರಿಗೆ, ಕೃಷಿ ಭೂಮಿಗೆ ನೀರುಣಿಸುವ ಜಲಾಶಯ. ಅದಕ್ಕೆ ದಕ್ಕೆ ತರುವ ಪ್ರಶ್ನೆಯೇ ಇಲ್ಲ. ಅಪಪ್ರಚಾರಕ್ಕೆ ಯಾರೂ ಬಲಿಯಾಗುವುದೂ ಬೇಡ ಎಂದು ಸಿಎಂ ಹೇಳಿದರು.

ಈ ಮೂಲಕ ಕೆಆರ್​ಎಸ್​ ಬಳಿ ಡಿಸ್ನಿಲ್ಯಾಂಡ್​ ಮತ್ತು ಪ್ರತಿಮೆ ನಿರ್ಮಾಣ ಮಾಡುವುದು ಶತಃಸಿದ್ಧ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.