Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಸಿಎಂ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ

Saturday, 11.08.2018, 5:28 AM       No Comments

ಮಂಡ್ಯ: ಸಾಲಮನ್ನಾಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಘನತೆಯನ್ನು ತಾವು ಕಳೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಚುನಾವಣೆಗೂ ಮುನ್ನ ರೈತರ ಸಂಪೂರ್ಣ ಸಾಲ ಮನ್ನಾ ಎಂದಿದ್ದರು. ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸ್ವತಂತ್ರವಾಗಿ ಬಂದಿಲ್ಲ ಅಂದ್ರು. ರೈತರು ಆಕ್ರೋಶದ ಜತೆಗೆ ಬಿಜೆಪಿ ಪ್ರತಿಭಟನೆ ನಡೆಸಿದ ನಂತರ ಬಜೆಟ್‌ನಲ್ಲಿ ಸಾಲ ಮನ್ನಾ ಘೋಷಿಸಿದರು. ಈಗ ದುಡ್ಡಿನ ಗಿಡ ಹಾಕಿಲ್ಲ ಎನ್ನುತ್ತಿದ್ದಾರೆ. ಮುಂದೆ ಪ್ರಣಾಳಿಕೆಯಲ್ಲಿ ‘ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮಾತ್ರ ಪ್ರಣಾಳಿಕೆ ಜಾರಿ’ ಎಂದು ಬ್ರಾಕೆಟ್‌ನಲ್ಲಿ ಬರೆಯಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಸಿಎಂ ಆಗಿ ಹತಾಶರಾಗಿದ್ದಾರೆ. ಅವರ ಪಕ್ಷದಲ್ಲೇ ಅವರಿಗೆ ಬೆಂಬಲ ಇದೆಯೋ ಇಲ್ಲವೋ ಗೊತ್ತಿಲ್ಲ. ಸಮನ್ವಯ ಸಮಿತಿಯಲ್ಲಿ ಸಮನ್ವಯತೆ ಇಲ್ಲ ಎಂಬುದು ಈಗಾಗಲೇ ಗೊತ್ತಾಗಿದೆ. ಹಾಗಾಗಿ ಸಿಎಂ ಅಸಹಾಯಕರಾಗಿದ್ದಾರೆ. ವಿರೋಧ ಪಕ್ಷ ಹಾಗೂ ರೈತ ಸಂಘಟನೆಗಳು ಸಾಲ ಮನ್ನಾಕ್ಕೆ ಒತ್ತಾಯಿಸಿದರೆ ನಮ್ಮನ್ನು ನಿರುದ್ಯೋಗಿಗಳು ಎನ್ನುತ್ತಾರೆ ಎಂದು ಜರಿದರು.

ಪತ್ರ ಬರೆಯುವ ಗುಮಾಸ್ತ: ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಗೆ ದಿನಕ್ಕೊಂದು ಪತ್ರ ಬರೆಯುತ್ತಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರೇ ಪತ್ರ ಬರೆಯುವ ಗುಮಾಸ್ತರಾಗಿದ್ದಾರೆ. ಪತ್ರ ಬರೆದು ಕುಮಾರಸ್ವಾಮಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ತಪ್ಪಿತಸ್ಥರನ್ನಾಗಿ ಮಾಡುತ್ತಿದ್ದಾರೆ. ಉತ್ತರಕುಮಾರನ ರೀತಿ ಪತ್ರ ಬರೆಯುವ ಬದಲಿಗೆ ಪತ್ರದಲ್ಲಿ ಇಂತಿಷ್ಟು ದಿನದಲ್ಲಿ ಕೆಲಸವಾಗಬೇಕೆಂದು ಗಡುವು ನೀಡಲಿ. ತಮ್ಮ ಪಕ್ಷದ ಮಾತಿಗೆ ಬೆಲೆ ಸಿಗದಿದ್ದರೆ, ರಾಜೀನಾಮೆ ನೀಡಿ ಅಧಿಕಾರದಿಂದ ವಾಪಸಾಗಲಿ ಎಂದು ಸವಾಲೆಸೆದರು.

ವರ್ಗಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ವಿಧಾನಸೌಧದ ಸುತ್ತ ಏಜೆಂಟ್‌ಗಳು ಅಧಿಕಾರಿಗಳ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ನನ್ನ 35 ವರ್ಷದ ರಾಜಕೀಯದಲ್ಲಿ ಇಷ್ಟು ಕೆಟ್ಟ ಆಡಳಿತ ನೋಡಿರಲಿಲ್ಲ. ವರ್ಗಾವಣೆಯಲ್ಲಿ ಇಂತಹ ಭ್ರಷ್ಟಾಚಾರವನ್ನು ಹಿಂದೆಂದು ಕಂಡಿರಲಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದರು.

ರಾಜ್ಯದಲ್ಲಿ ಜನಹಿತ ಸರ್ಕಾರ ಇಲ್ಲ. ಕುಮಾರಸ್ವಾಮಿ ಇರುವಷ್ಟು ದಿನ ಜನರ ಘನತೆ ಕಾಪಾಡಲಿ. ಸರ್ಕಾರದ ಬಗ್ಗೆ ಅಧಿಕಾರಿಗಳಿಗೆ ಭಯವಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಆದ್ದರಿಂದ ಯಾಕೆ ನಿಷ್ಠುರವಾಗಬೇಕೆಂದು ವರ್ಗಾವಣೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಶಾಸಕರು ದುರ್ಬಲರು: ಕಾಂಗ್ರೆಸ್ ಶಾಸಕರು ದುರ್ಬಲರು, ಧನದಾಹಿಗಳು, ಮಾರಾಟಕ್ಕೆ ಇರುವವರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಲ ಸಂಪನ್ಮೂಲ ಸಚಿವ ಡಿಕೆಶಿ ಒಪ್ಪಿಕೊಂಡಿದ್ದಾರೆ ಎಂದು ಈಶ್ವರಪ್ಪ ತಿರುಗೇಟು ನೀಡಿದರು.

ನಾವು ಯಾವ ಶಾಸಕರನ್ನು ಕರೆಯುತ್ತಿಲ್ಲ. ಅಂತ ಅವಶ್ಯಕತೆ ಕೂಡ ನಮಗಿಲ್ಲ. ಶಾಸಕರನ್ನು ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ದುರಾಡಳಿತದಿಂದ ಸರ್ಕಾರ ತಾನಾಗಿಯೇ ಬೀಳಲಿದೆ. ಸಿದ್ದರಾಮಯ್ಯರನ್ನು ಯಾವ ಕಾರಣಕ್ಕೂ ಬಿಜೆಪಿ ಸೇರಿಸಿಕೊಳ್ಳಲ್ಲ. ಮತಾಂಧರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಅವಶ್ಯಕತೆಯಿಲ್ಲ. ಕಾಂಗ್ರೆಸ್ 78 ಸ್ಥಾನಕ್ಕೆ ಕುಸಿಯಲು ಅವರೇ ಕಾರಣ ಎಂದರು.

ಹಾಲಿಗೆ 30 ರೂ. ನೀಡಿ ಋಣ ತೀರಿಸಲಿ: ಮಂಡ್ಯ ಜಿಲ್ಲೆಯ ಜನತೆ ಕುಮಾರಸ್ವಾಮಿ ಅವರ ಮೇಲೆ ನಂಬಿಕೆ ಇಟ್ಟು ವಿಧಾನಸಭೆ, ಲೋಕಸಭೆತನಕ ಜೆಡಿಎಸ್‌ನವರನ್ನು ಕಳುಹಿಸಿದ್ದಾರೆ. ಈ ಜನರ ಋಣ ತೀರಿಸಲು ಲೀಟರ್ ಹಾಲಿಗೆ 30 ರೂ. ನೀಡಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಆಗ್ರಹಿಸಿದರು.

ಇಡೀ ರಾಜ್ಯದಲ್ಲಿ ಲೀಟರ್ ಹಾಲಿಗೆ ಕಡಿಮೆ ಹಣ ಕೊಡುತ್ತಿರುವ ಜಿಲ್ಲೆ, ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿರುವ ಜಿಲ್ಲೆ ಮಂಡ್ಯ. ರೈತರಿಗೆ ನಾಟಿ ಮಾಡುವುದು ಗೊತ್ತಿದೆ. ನಾಟಿ ನಾಟಕ ಬಿಟ್ಟು ಹಾಲಿನ ದರ, ಕಬ್ಬಿನ ದರ ನಿಗದಿ ಮಾಡಲಿ ಎಂದವರು ಸವಾಲೆಸೆದರು.

ಮಾಜಿ ಸಚಿವ ಲಕ್ಷ್ಮಣ ಸವದಿ, ಶಾಸಕರಾದ ಸಿ.ಟಿ.ರವಿ, ನಾಗೇಂದ್ರ, ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ, ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ ಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *

Back To Top