ಶಿಕ್ಷಕ್ಷರ ಸೇವೆ ಸ್ಮರಣೀಯ

ಎಚ್.ಡಿ.ಕೋಟೆ: ಸಮಾಜದಲ್ಲಿ ನಮ್ಮ ತಪ್ಪನ್ನು ತಿದ್ದಿ ತೀಡಿ ಅಕ್ಷರ ಜ್ಞಾನ ನೀಡುವ ಶಿಕ್ಷಕರನ್ನು ಸ್ಮರಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ್ ನುಡಿದರು.

ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರ ಹಾಗೂ ಜನಪ್ರತಿನಿಧಿಗಳು ಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಕರು ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಬೋಧಿಸುವ ವಿಷಯವನ್ನು ತಾವು ಮೊದಲು ಅಧ್ಯಯನ ಮಾಡಬೇಕು. ಪ್ರತಿಯೊಬ್ಬ ಶಿಕ್ಷಕರು ನಾಗರಹಾವು ಸಿನಿಮಾದ ಚಾಮಯ್ಯ ಮೇಷ್ಟ್ರರಂತೆ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಶಿಕ್ಷಕರ ಕೊರತೆ ನಡುವೆಯೂ ಇರುವ ಶಿಕ್ಷಕರು ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದೀರಿ. ನಿಮಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಶಿಕ್ಷಕರ ಕೊರತೆ ನಿವಾರಣೆ ದೃಷ್ಟಿಯಿಂದಲೇ ಜಿಪಂ ಸಹಯೋಗದಲ್ಲಿ ಹೆಚ್ಚಿನ ಅತಿಥಿ ಶಿಕ್ಷಕರನ್ನು ತಾಲೂಕಿಗೆ ನೀಡಲಾಗಿದೆ ಎಂದರು.

ಜಿ.ಪಂ.ಸದಸ್ಯ ವೆಂಕಟಸ್ವಾಮಿ ಮಾತನಾಡಿ, ತಾಲೂಕಿನ ಶೈಕ್ಷಣಿಕ ವಲಯದಲ್ಲಿ ಶಾಲಾ ಕೊಠಡಿ ಸಮಸ್ಯೆ, ಶೌಚಗೃಹ ಸಮಸ್ಯೆ ಸೇರಿದಂತೆ ಬಹಳಷ್ಟು ಅನನುಕೂಲವಿದೆ, ಶಾಸಕರು ಇದನ್ನು ಸರಿಪಡಿಸಲು ಮುಂದಾಗಬೇಕು ಎಂದರು.

ನಿವೃತ್ತರಾದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಹಾಗೂ ರಾಜ್ಯ ಪ್ರಶಸ್ತಿ ಪಡೆದ ತಾಲೂಕಿನ ಇಬ್ಬರು ಶಿಕ್ಷಕರನ್ನು ಶಾಸಕ ಅನಿಲ್ ಚಿಕ್ಕಮಾದು ಸನ್ಮಾನಿಸಿದರು.

ಜಿ.ಪಂ. ಸದಸ್ಯೆ ಪರಿಮಳಾ ಶ್ಯಾಮ್, ಸರಗೂರು ಪ.ಪಂ. ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ ಬಿಲ್ಲಯ್ಯ, ಪುರಸಭೆ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ಕೆ.ಎಲ್.ಸುಹಾಸಿನಿ, ಪ್ರೇಮ್ ಸಾಗರ್, ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ, ತಾಲೂಕು ಬಿಜೆಪಿ ಅಧ್ಯಕ್ಷ ಚಾಮಲಾಪುರ ಗಿರೀಶ್, ವಕೀಲ ಚೌಡಳ್ಳಿ ಜವರಯ್ಯ ಹಾಜರಿದ್ದರು.