ಎಚ್.ಡಿ.ಕೋಟೆ: ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೇರಳದಿಂದ ಪ್ರಯಾಣಿಕರು, ಮದ್ಯ ಪ್ರಿಯರು ಕಳ್ಳಮಾರ್ಗದಿಂದ ತಾಲೂಕಿನ ಗಡಿ ಭಾಗದ ಕಬಿನಿ ಹಿನ್ನೀರಿನ ಮೂಲಕ ನುಸುಳಿಕೊಂಡು ರಾಜ್ಯ ಪ್ರವೇಶಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಗಸ್ತು ಪ್ರಾರಂಬಿಸಿದೆ.
ತಾಲೂಕಿನ ಗಡಿ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಹೊರ ರಾಜ್ಯ ಪ್ರವೇಶ ಪಾಸ್ ಇದ್ದವರಿಗೆ ಮಾತ್ರ ರಾಜ್ಯದೊಳಗೆ ಅನುಮತಿ ಇದೆ. ಇಲ್ಲಿಗೆ ಬಂದವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ. ಹಾಗಾಗಿ ಕ್ವಾರಂಟೈನ್‌ನಿಂದ ತಪ್ಪಿಸಿಕೊಳ್ಳಲು ಕಬಿನಿ ಹಿನ್ನೀರಿನ ಪ್ರದೇಶದ ಅರಣ್ಯದ ಮೂಲಕ, ದ್ವಿಚಕ್ರ ವಾಹನಗಳ ಮೂಲಕ, ಪಾದಚಾರಿ ಮಾರ್ಗದ ಮೂಲಕ ಪ್ರತಿದಿನ ನದಿ ದಾಟಿ ಬರುತ್ತಿರುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ನಾಲ್ಕು ದಿನಗಳಿಂದ ಬೀಚನಹಳ್ಳಿ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್‌ಟೆಬಲ್‌ಗಳನ್ನು ಕಬಿನಿ ಹಿನ್ನೀರಿನ ಬಾವಲಿ ಚೆಕ್‌ಪೋಸ್ಟ್‌ನಿಂದ ಮಾಚ್ಚೂರು ಗ್ರಾಮದವರೆಗೆ ನಿಯೋಜಿಸಿದ್ದರೂ ಮದ್ಯಪ್ರಿಯರು ಪೊಲೀಸರ ಕಣ್ ತಪ್ಪಿಸಿ ಡಿ.ಬಿ.ಕುಪ್ಪೆ, ಹೊಸಹಳ್ಳಿ ಹಾಡಿ ಸೇರಿದಂತೆ ಇತರೆ ಜಾಗಗಳಿಗೆ ಬಂದು ಮದ್ಯ ಖರೀದಿ ಮಾಡಿ ಹೋಗುತ್ತಿದ್ದಾರೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಕೇರಳ ರಾಜ್ಯದ ರೈತರು ಶುಂಠಿ ಬೆಳೆ ಬೆಳೆಯುತ್ತಿದ್ದಾರೆ. ತಮ್ಮ ಜಮೀನುಗಳಿಂದ ಊರುಗಳಿಗೆ ಹೋಗಿಬರಲು ಗಡಿ ಭಾಗದ ಗ್ರಾಮಗಳಲ್ಲಿ ಸಂಚರಿಸುವ ವಾಹನಗಳ ಮೂಲಕ ತಾವು ಸೇರಬೇಕಾಗಿರುವ ಸ್ಥಳಗಳಿಗೆ ಸೇರುತ್ತಿದ್ದಾರೆ.
ಕೇರಳದಿಂದ ಅಕ್ರಮವಾಗಿ ನುಸುಳಿಕೊಂಡು ಬರುವವರನ್ನು ಗಡಿ ಭಾಗದ ಸ್ಥಳೀಯರು ತಡೆದು ಕೆಲವರನ್ನು ವಾಪಸ್ ಕಳಿಸಿದ್ದಾರೆ. ಮದ್ಯಪ್ರಿಯರು ಹೆಚ್ಚು ಬರುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಮದ್ಯದ ಅಂಗಡಿಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂದ್ ಮಾಡಿದ್ದರೂ ಅಲ್ಲಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯರ ಸಹಕಾರ ಪಡೆದು ಮದ್ಯ ಖರೀದಿ ಮಾಡಿ ಹೋಗುತ್ತಿದ್ದು, ಅಕ್ರಮ ನುಸುಳುಕೋರರಿಂದ ತಾಲೂಕಿನಲ್ಲಿ ಕರೊನಾ ಹರಡುವ ಆತಂಕ ಉಂಟಾಗಿದೆ. ತಾಲೂಕು ಆಡಳಿತ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಮಾಡಿ ಗಡಿ ದಾಟಿ ಬರುತ್ತಿರುವವರ ಮೇಲೆ ವಿಶೇಷ ನಿಗಾ ಇಡಬೇಕಿದೆ.