More

    ಕೇಂದ್ರ ಕಾರ್ಮಿಕ ವಿರೋಧಿ ನೀತಿಗೆ ಖಂಡನೆ

    ಎಚ್.ಡಿ.ಕೋಟೆ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರುದ್ಧ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು.

    ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಜಮಾವಣೆಗೊಂಡರು. ಬಳಿಕ ಹುಣಸೂರು-ಬೇಗೂರು ರಸ್ತೆಯಲ್ಲಿ ಸಾಗಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂದೆ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

    ಸಿಐಟಿಯು ಅಧ್ಯಕ್ಷ ಶಿವಣ್ಣ ಮಾತನಾಡಿ, ಭಾರತ ಆರ್ಥಿಕತೆಯಲ್ಲಿ ನಿಧಾನಗತಿಯ ಬೆಳವಣಿಗೆಯಿಂದಾಗಿ ದೇಶದ ಜನತೆಯನ್ನು ಬೆಚ್ಚಿ ಬೀಳಿಸುತ್ತಿದೆ. 2016ರಲ್ಲಿ ಶೇ.9.4 ರಾಷ್ಟ್ರದ ಜಿಡಿಪಿ ದರ 2019ಕ್ಕೆ ಶೇ.4.5 ಕುಸಿದಿದೆ. ಇದರ ಪರಿಣಾಮ ಜನಸಾಮಾನ್ಯರ ಮೇಲೆ ಹೊರೆ ಬಿದ್ದಿದೆ. ಇಂದು ರೈತ ಕೃಷಿ ಮಾಡಿ ಬದುಕಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಲೋಕಸಭೆ ಮುಂದಿರುವ ಋಣಮುಕ್ತ ಕಾಯ್ದೆಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.

    ಬೇಡಿಕೆಗಳು: 21,000 ರೂ. ಕನಿಷ್ಠ ವೇತನದೊಂದಿಗೆ ವೇತನ ಶ್ರೇಣಿ ನಿಗದಿ ಮಾಡಬೇಕು, ಕೇಂದ್ರ ಸರ್ಕಾರ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ ಕಡಿತ ಮಾಡಬಾರದು, ಗ್ರಾಮ ಪಂಚಾಯಿತಿಯ ಎಲ್ಲ ನೌಕರರಿಗೂ ಮಾಸಿಕ 10 ಸಾವಿರ ವೇತನ ನಿಗದಿಮಾಡಿ, ಭವಿಷ್ಯನಿಧಿ, ಆರೋಗ್ಯ ವಿಮೆ ಕೊಡಬೇಕು ಹಾಗೂ ಕಾಯಂಗೊಳಿಸಬೇಕು., ಗ್ರಾಮ ಪಂಚಾಯಿತಿ ಸಿಬ್ಬಂದಿಯ ಅರ್ಹತೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಕಾಯ್ದೆ ಜಾರಿ ಮಾಡಬೇಕು, ಡಾ.ಸ್ವಾಮಿನಾಥನ್ ವರದಿ ಆಧಾರಿತ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಜಾರಿಯಾಗಬೇಕು, ಅಗತ್ಯವಸ್ತುಗಳ ಬೆಲೆ ಏರಿಕೆಗೆ ತಡೆ ಹಾಕಬೇಕು, ಬಿಪಿಎಲ್ ಆದಾಯ ಮಿತಿಯನ್ನು ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

    ಧರ್ಮಾವತಿ, ಚೌಡಳ್ಳಿ ಜವರಯ್ಯ, ಫಾರುಕ್, ಪ್ರಸಾದ್, ರವಿಚಂದ್ರ, ಜಯಮ್ಮ, ನೀಲಮ್ಮ, ಮಂಗಳಮ್ಮ, ಶಿವಮ್ಮ, ಯಶೋದಾ, ಸಾವಿತ್ರಮ್ಮ, ಸುಮಾ ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts