ಕಾವ್ಯಗಳು ಪ್ರತಿಕ್ರಿಯೆಗೆ ಬಹುದೊಡ್ಡ ಮಾಧ್ಯಮ

ಎಚ್.ಡಿ.ಕೋಟೆ: ಕಾವ್ಯಕ್ಕೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿದೆ ಹಾಗಾಗಿ ಪ್ರೀತಿಗೆ ಜಾಗ ಕಲ್ಪಿಸಿ ಸಾಂಸ್ಕೃತಿಕ ಉತ್ತರಾಧಿಕಾರಿಯನ್ನು ಸೃಷ್ಟಿಸುವಂತಹ ಕವಿತೆಗಳು ತಮ್ಮಿಂದ ಸೃಷ್ಟಿಯಾಗಬೇಕು ಎಂದು ಕವಿ, ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಪಟ್ಟಣದ ಪುರಸಭೆ ಮುಂಭಾಗ ಹಮ್ಮಿಕೊಂಡಿದ್ದ ಗ್ರಾಮೀಣ ದಸರಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾವ್ಯ ಯಾವಾಗಲೂ ಪ್ರತಿಕ್ರಿಯೆಗೆ ದೊಡ್ಡ ಮಾಧ್ಯಮವಾಗಿದೆ, ಹಿಂದಿನ ದೇಶದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಕಾವ್ಯಗಳು ಪರಿಣಾಮ ಬೀರಿದ್ದವು. ಎಚ್.ಡಿ.ಕೋಟೆ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರೂ, ವನಸಿರಿ ನಾಡಿನ ನೀವು ಸಾಂಸ್ಕೃತಿಕ ಶ್ರೀಮಂತರು ಎಂದು ಬಣ್ಣಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿಯ ಕಾವ್ಯಕ್ಕೆ ಬಹಳ ದೊಡ್ಡ ಪರಂಪರೆ ಇದೆ, ಹೆಚ್ಚು ಗೌರವವೂ ಇದೆ, ಯುವ ಕವಿಗಳು ವರ್ತಮಾನದ, ಸಮಕಾಲೀನ ಸಂದರ್ಭಕ್ಕೆ ಬೆಳಕು ಚೆಲ್ಲುವಂತೆ ಕವಿತೆಗಳನ್ನು ರಚಿಸಿದರೆ ಆ ಕಾವ್ಯ ದೀರ್ಘಕಾಲ ಉಳಿಯುತ್ತದೆ ಎಂದರು.

ಕವಿತೆ ಸಂತೋಷಕೊಟ್ಟರೆ ಸಾಲದು ಸಂದೇಶ ಕೊಡಬೇಕು ಆಗ ಆ ಕವಿತೆ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತದೆ. ಅದರಲ್ಲೂ ವಾಸ್ತವ ಬಿಂಬಿತವಾಗಿದ್ದರೆ ಅಂತಹ ಕಾವ್ಯಗಳ ಮೌಲ್ಯ ಹೆಚ್ಚು ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಹಿರಿಯ ಕವಿಗಳಾದ ದೊರೆಸ್ವಾಮಿ, ಡಾ.ಎಂ.ಎನ್. ರವಿಶಂಕರ್, ಸಿದ್ದಾಚಾರ್, ಜಾನ್ ಕೆನಡಿ, ಕಿತ್ತೂರು ಭಾಸ್ಕರ್, ಯುವ ಕವಿಗಳಾದ ವೆಂಕಟಯ್ಯ, ಬಿ.ಕಿರಣ್, ನಾಗಪುರುಷೋತ್ತಮ ಪಂಡಿತ, ಮಹದೇವಯ್ಯ, ಬಿ.ವಿ.ಶ್ರೀನಿವಾಸ್, ಚೇತನ್‌ಶರ್ಮ ಸೇರಿದಂತೆ 10ಕ್ಕೂ ಹೆಚ್ಚು ಕವಿಗಳು ಕಾವ್ಯ ವಾಚನ ಮಾಡಿದರು.