ನೇಣು ಬಿಗಿದುಕೊಂಡು ರೈತ ಸಾವು

ಎಚ್.ಡಿ.ಕೋಟೆ: ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರಿಂದ ನನಗೆ ಮತ್ತು ಕುಟುಂಬಕ್ಕೆ ಅನ್ಯಾಯವಾಯಿತು ಎಂದು ಮನನೊಂದು ತಾಲೂಕಿನ ಅಂತರ ಸಂತೆಯಲ್ಲಿ ಗುರುವಾರ ರೈತ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ರಾಜಣ್ಣ (55)ಮೃತಪಟ್ಟ ರೈತ. ರಾಜಣ್ಣ ಗ್ರಾಮದ ಸರ್ವೇ ನಂಬರ್ 45 ಹಾಗೂ 46 ರ 2 ಎಕರೆ ಜಮೀನನ್ನು ತಮ್ಮ ತಂದೆ ಕಾಲದಿಂದಲೂ ವ್ಯವಸಾಯ ಮಾಡಿಕೊಂಡು ಬರುತ್ತಿದ್ದರು. ಈ ನಡುವೆ ಈ ಜಮೀನು ನಮಗೆ ಸೇರಬೇಕು ಎಂದು ನಿಂಗರಾಜು ಮತ್ತು ಅವರ ಕಡೆಯವರು ನನಗೆ ಮತ್ತು ನಮ್ಮ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಬೀಚನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.

ಆದರೂ ನಿಂಗರಾಜು ಮತ್ತು ಅವರ ಕಡೆಯವರು ಇದೇ ಜಮೀನನ್ನು ಸರ್ವೇ ಇಲಾಖೆಯಿಂದ ಅಳತೆ ಮಾಡಿಸಿ 2 ಎಕರೆ ಜಮೀನಿನಲ್ಲಿ 30 ಗುಂಟೆ ಜಮೀನು ನಮಗೆ ಸೇರಬೇಕು ಎಂದು ತಂತಿ ಬೇಲೆ ಹಾಕಲು ಮುಂದಾಗಿದ್ದರು. ರಾಜಣ್ಣ ತಡೆದು ನಾನು ಅಳತೆ ಮಾಡಿಸುವವರೆಗೆ ಯಾವುದೇ ಕೆಲಸ ಮಾಡಬಾರದು ಎಂದು ಗ್ರಾಮಸ್ಥರ ಸಮ್ಮುಖದಲ್ಲಿ ತಿಳಿಸಿದ್ದರು ಎನ್ನಲಾಗಿದೆ.

ಇದರ ನಡುವೆ ಸೋಮವಾರ ನಿಂಗರಾಜು ಮತ್ತು ಅವರ ಕಡೆಯವರು ಏಕಾಏಕಿ ಜಮೀನಿಗೆ ಹೋಗಿ ಜಮೀನಿನ ಸುತ್ತ ತಂತಿ ಬೇಲಿ ಹಾಕಿದ್ದಾರೆ . ಕೇಳಲು ಹೋದ ಮೃತ ರಾಜಣ್ಣ ಮತ್ತು ಆತನ ಪತ್ನಿ ಚಂದ್ರಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಮನನೊಂದ ಚಂದ್ರಮ್ಮ ಮಂಗಳವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ . ಅಷ್ಟರಲ್ಲಿ ಅಕ್ಕ ಪಕ್ಕದವರು ಆಸ್ಪತ್ರೆಗೆ ದಾಖಲಿಸಿ ಬದುಕಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆಯೂ ಬೀಚನಹಳ್ಳಿ ಪೊಲೀಸರು ಹೇಳಿಕೆ ಪಡೆದು ಸಂಬಂಧಿಸಿದವರ ವಿರುದ್ಧ ದೂರು ದಾಖಲಿಸಿಲ್ಲ .ಅಲ್ಲದೆ ಮನೆ ಜಾಗದ ವಿಚಾರವಾಗಿಯೂ ನಿಂಗರಾಜು ಮತ್ತು ಅವರ ಕಡೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ನಿಂಗರಾಜು ಮತ್ತು ಅವರ ಕಡೆಯವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮೃತನ ಪತ್ನಿ ಚಂದ್ರಮ್ಮ ತಿಳಿಸಿದ್ದಾರೆ. ಇದರಿಂದ ಮನನೊಂದ ರಾಜಣ್ಣ ಗುರುವಾರ ರಾತ್ರಿ ತಮ್ಮ ಜಮೀನಿನಲ್ಲಿ ಮರಕ್ಕೆ ಪಂಚೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಕ್ರಮಕ್ಕೆ ಪಟ್ಟು: ಶುಕ್ರವಾರ ಬೆಳಗ್ಗೆ ಮೃತ ರಾಜಣ್ಣ ನೇಣು ಬಿಗಿದುಕೊಂಡು ಮೃತಪಟ್ಟಿರುವ ವಿಚಾರ ರಾಜಣ್ಣ ಸಂಬಂಧಿಕರಿಗೆ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರಿಗೆ ತಿಳಿದಿದೆ. ತಕ್ಷಣ ಅವರು ಸ್ಥಳಕ್ಕೆ ಆಗಮಿಸಿ ಘಟನೆಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಬೇಕು. ಬೀಚನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಪುಟ್ಟಸ್ವಾಮಿ ಅವರನ್ನು ಸೇವೆಯಿಂದ ಅಮಾನತುಪಡಿಸಬೇಕು. ಅಲ್ಲಿಯವರೆಗೆ ಶವವನ್ನು ಕೆಳಕ್ಕೆ ಇಳಿಸಲು ಅವಕಾಶ ನೀಡುವುದಿಲ್ಲ . ಸ್ಥಳಕ್ಕೆ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಹುಣಸೂರು ಡಿವೈಎಸ್ಪಿ ಭಾಸ್ಕರ್ ರೈ, ತಾಲೂಕು ದಂಡಾಧಿಕಾರಿ ಮಹೇಶ್ ಆಗಮಿಸಿ ಪರಿಶೀಲನೆ ಮಾಡಿದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ಭರವಸೆ ನೀಡಿದ ನಂತರ ಮೃತ ರಾಜಣ್ಣನ ಶವ ವನ್ನು ಮರದಿಂದ ಕೆಳಗೆ ಇಳಿಸಲಾಯಿತು. ನಂತರ ಎಚ್. ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.

ರಾಜಣ್ಣನ ಸಾವಿಗೆ ಕಾರಣರಾದ ನಿಂಗರಾಜು, ಪುಟ್ಟಸ್ವಾಮಿಗೌಡ, ಚಂದ್ರ ಎಂಬುವವರನ್ನು ಬೀಚನಹಳ್ಳಿ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಮೀನು ಮತ್ತು ಜಾಗದ ವಿಚಾರದಲ್ಲಿ ನನಗೆ ಮತ್ತು ನಮ್ಮ ಕುಟುಂಬಕ್ಕೆ ನಿಂಗರಾಜು ಮತ್ತು ಅವರ ಕಡೆಯವರು ತೊಂದರೆ ನೀಡುತ್ತಿದ್ದಾರೆ ಎಂದು ಬೀಚನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಠಾಣೆಯ ಸಬ್ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ ಅವರು ನಮ್ಮ ದೂರನ್ನು ಪರಿಗಣಿಸಲಿಲ್ಲ. ನಾವು ದೂರು ನೀಡಿದವರ ಪರವಾಗಿ ಜಮೀನಿಗೆ ಬಂದು ಜಮೀನಿನ ಸುತ್ತ ತಂತಿ ಬೇಲಿ ನಿರ್ಮಾಣ ಮಾಡಿಸಿದರು. ನನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ಬೀಚನಹಳ್ಳಿ ಪಿಎಸ್‌ಐ ಪುಟ್ಟಸ್ವಾಮಿ ಅವರೇ ಕಾರಣ.
ಚಂದ್ರಮ್ಮ . ಮೃತ ರಾಜಣ್ಣನ ಪತ್ನಿ.

ಬೀಚನಹಳ್ಳಿ ಪಿಎಸ್‌ಐ ಸೇರಿದಂತೆ 14 ಜನರ ಮೇಲೆ ಮೃತ ರಾಜಣ್ಣನ ಹೆಂಡತಿ ಚಂದ್ರಮ್ಮ ದೂರು ನೀಡಿದ್ದಾರೆ. ಈಗಾಗಲೇ ಘಟ ನೆಗೆ ಕಾರಣರಾದ ನಿಂಗರಾಜು, ಪುಟ್ಟಸ್ವಾಮಿಗೌಡ, ಚಂದ್ರ ಎಂಬುವರನ್ನು ಪೊಲೀಸ್ ವಶಕ್ಕೆ ಪಡೆದು ಕ್ರಮ ಜರುಗಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.

ಭಾಸ್ಕರ್‌ರೈ, ಡಿವೈಎಸ್ಪಿ ಹುಣಸೂರು.

Leave a Reply

Your email address will not be published. Required fields are marked *