More

    ಹುಳುಮಿಶ್ರಿತ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥ

    ಎಚ್.ಡಿ.ಕೋಟೆ: ಪಟ್ಟಣದ ಹುಣಸೂರು ರಸ್ತೆಯಲ್ಲಿರುವ ಸರ್ಕಾರಿ ಆದರ್ಶ ಶಾಲೆಯಲ್ಲಿ ಸೋಮವಾರ ಹುಳುಮಿಶ್ರಿತ ಬಿಸಿಯೂಟ ಸೇವಿಸಿ ಸುಮಾರು 30 ಮಕ್ಕಳು ಅಸ್ವಸ್ಥರಾಗಿದ್ದಾರೆ.

    6 ರಿಂದ 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ 300 ಮಕ್ಕಳಿಗೆ ಎಂದಿನಂತೆ ಸೋಮವಾರ ಮಧ್ಯಾಹ್ನ ಬಿಸಿಯೂಟ ನೀಡಲಾಗಿತ್ತು. ಮೊದಲಿಗೆ 6 ಮತ್ತು 7 ನೇ ತರಗತಿಯ ಸುಮಾರು 30 ಮಕ್ಕಳಿಗೆ ಊಟ ಬಡಿಸಿದ್ದಾರೆ. ಊಟದಲ್ಲಿ ಇದ್ದ ಹುಳುಗಳನ್ನು ಗಮನಿಸಿದ ಮಕ್ಕಳು ತಕ್ಷಣ ಮುಖ್ಯ ಶಿಕ್ಷಕರಿಗೆ ವಿಷಯ ತಿಳಿಸಿದರು. ಸ್ವಲ್ಪ ಸಮಯದ ನಂತರ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿ ಮಾಡಿದ್ದಾರೆ. ಕೂಡಲೇ ಊಟ ನಿಲ್ಲಿಸಿ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು.

    ಸುಜಾತಾ ಮತ್ತು ಅಬ್ರಾರ್ ಎಂಬ ವಿದ್ಯಾರ್ಥಿನಿಯರು ತೀವ್ರವಾಗಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಉಳಿದ ಮಕ್ಕಳಿಗೆ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಮನೆಗೆ ಕಳುಹಿಸಲಾಯಿತು. ವಿಚಾರ ತಿಳಿಯುತ್ತಿದ್ದಂತೆ ಪಾಲಕರು ಆಸ್ಪತ್ರೆಗೆ ಬಂದು ಮಕ್ಕಳ ಸ್ಥಿತಿಗತಿ ನೋಡಿ ಶಾಲೆಯ ಆಡಳಿತ ಮಂಡಳಿ ಮತ್ತು ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಶಾಲೆಗೆ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಭಾಸ್ಕರ್, ಡಾ.ರವಿಕುಮಾರ್ ಹಾಗೂ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಅಡುಗೆ ಪದಾರ್ಥ ಪರಿಶೀಲಿಸಿದರು. ಅಡುಗೆ ಬೇಳೆ ಹಾಳಾಗಿದ್ದು, ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು.

    ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಕರ್ತವ್ಯ ಲೋಪವೆಸಗಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಸ್ಥಳದಲ್ಲಿದ್ದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದರಾಜು ಮತ್ತು ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು.

    ಆಸ್ಪತ್ರೆಗೆ ತಹಸೀಲ್ದಾರ್ ಆರ್.ಮಂಜುನಾಥ್, ಡಿಡಿಪಿಐ ಪಾಂಡುರಂಗ, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಡಿಎಚ್‌ಒ ಡಾ.ವೆಂಕಟೇಶ್, ಚಿಕ್ಕವೀರನಾಯಕ, ಲಾರಿ ಪ್ರಕಾಶ್, ಲಕ್ಷ್ಮಣ್, ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್, ಸುವಾಸಿನಿ ದಿನೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts