ದೇವೇಗೌಡರು ಭಸ್ಮಾಸುರ ಇದ್ದಂಗೆ, ಈಗ ಕಾಂಗ್ರೆಸ್​ ತಲೆ ಮೇಲೆ ಕೈಯಿಟ್ಟಿದ್ದಾರೆ: ಬಸನಗೌಡ ಪಾಟೀಲ್​ ಯತ್ನಾಳ್​

ವಿಜಯಪುರ: ಮಾಜಿ ಪ್ರಧಾನಿ ದೇವೇಗೌಡ ಭಸ್ಮಾಸುರ ಇದ್ದ ಹಾಗೆ. ಅವರು ತಲೆ ಮೇಲೆ ಕೈಯಿಟ್ಟರೆ ಕಾಂಗ್ರೆಸ್​ ಭಸ್ಮವಾಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಾಗ್ದಾಳಿ ನಡೆಸಿದರು.

ದೇವೇಗೌಡರು ಈಗಾಗಲೇ ಕಾಂಗ್ರೆಸ್​ ತಲೆ ಮೇಲೆ ಕೈಯಿಟ್ಟಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್​ ಕೂಡ ಭಸ್ಮ ಆಗಲಿದೆ. ದೇವೇಗೌಡರು ಯಾವಾಗ ಏನು ಮಾಡುತ್ತಾರೋ ಗೊತ್ತಿಲ್ಲ. ಮೋದಿ ಅವರನ್ನು ಭೇಟಿ ಆಗುವ ಮೂಲಕ ಕಾಂಗ್ರೆಸ್​ಗೆ ಬೆದರಿಕೆ ಹಾಕುತ್ತಿದ್ದಾರೆ. ಕಾಂಗ್ರೆಸ್​ಗೆ ನಮ್ಮನ್ನು ಬಿಟ್ಟರೆ ಗತಿಯಿಲ್ಲ ಎಂಬುದು ದೇವೇಗೌಡ ಮತ್ತು ಕುಮಾರಸ್ವಾಮಿಗೆ ಗೊತ್ತಾಗಿದೆ. ಹಾಗಾಗಿ ಕಾಂಗ್ರೆಸ್​ ದಿನನಿತ್ಯ ಜೆಡಿಎಸ್​ ಮನೆ ಬಾಗಿಲು ಕಾಯುವಂತಾಗಿದೆ ಎಂದು ಕುಟುಕಿದರು.

ದೇವೇಗೌಡರು ಕಣ್ಣೀರು ಹಾಕಿದ ಸುದ್ದಿ ಕೇಳಿದೆ. ಕುಮಾರಸ್ವಾಮಿ ಕರ್ಚೀಫ್ ದೇವೇಗೌಡರ ಬಳಿ ಬಂದಿರಬೇಕು. ಅವರಿಬ್ಬರದ್ದೂ ರೆಡಿಮೇಡ್​ ಕಣ್ಣೀರು. ಯಾವಾಗಲೂ ಜಂಡೂಬಾಮ್​ ಹಾಕಿಕೊಂಡು ಇರುತ್ತಾರೆ. ದಿನೇಶ್​ ಗುಂಡುರಾವ್​ ಪುಟಗೋಸಿ ಇದ್ದಾಂಗೆ ಅವರಿಗೇನು ಗೊತ್ತು ರಫೇಲ್​ ಬಗ್ಗೆ ಎಂದು ವ್ಯಂಗ್ಯವಾಡಿದರು.

ಸೋನಿಯಾ ಗಾಂಧಿ ಶ್ರೀಮಂತ ಮಹಿಳೆ

ಬ್ರಿಟನ್​ ರಾಣಿ ನಂತರ ಸೋನಿಯಾ ಗಾಂಧಿ ಪ್ರಪಂಚದ ಎರಡನೇ ಶ್ರೀಮಂತ ಮಹಿಳೆ. ಸಮ್ಮಿಶ್ರ ಸರ್ಕಾರದಲ್ಲಿ ವಿಧಾನ ಸೌಧದ ಒಳಗಡೆ ಭ್ರಷ್ಟಾಚಾರ ನಡೆಯುತ್ತಿದೆ. ಅಂಬಾನಿಗೆ ಸಹಾಯ ಮಾಡಿದವರು ಕಾಂಗ್ರೆಸ್​ನವರು. ನೀರವ್​ ಮೋದಿಗೆ, ಮಲ್ಯಗೆ ಸಾಲ ನೀಡಿದವರೂ ಕಾಂಗ್ರೆಸ್​ನವರು. ದಾವೂದ್​ ಇಬ್ರಾಹಿಂನನ್ನು ಶೀಘ್ರವೇ ಹಿಡಿದುಕೊಂಡು ಬರಲಾಗುತ್ತದೆ ಎಂದು ಹೇಳಿದರು.

ಐಟಿ ರೈಡ್​ ದ್ವೇಷಕ್ಕಲ್ಲ

ಐಟಿ ರೈಡ್​ ಯಾವುದೇ ದ್ವೇಷದಿಂದ ಆಗುತ್ತಿಲ್ಲ. ಪಕ್ಷಾತೀತವಾಗಿ ದಾಳಿ ಆಗುತ್ತಿದೆ. ಮೋದಿ ಎಲ್ಲವನ್ನೂ ತ್ಯಾಗ ಮಾಡಿದವರು. ಹಣ ಗಳಿಸಿ ಅವರಿಗೆ ಆಗಬೇಕಾಗಿರುವುದು ಏನು ಎಂದರು.

ಸುಪ್ರೀಂಕೋರ್ಟ್​ ಗಮನಹರಿಸುತ್ತಿಲ್ಲ

ಸುಪ್ರಿಂಕೋರ್ಟ್​ ರಾಮಮಂದಿರ ನಿರ್ಮಾಣದ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಸುಪ್ರೀಂಕೋರ್ಟ್​ ಬಗ್ಗೆ ಗೌರವ ಇದೆ. ಆದರೆ ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನು ಕೋರ್ಟ್​ನ ನಡೆಯನ್ನು ಗೌರವಿಸುತ್ತೇನೆ ಎಂದು ತಿಳಿಸಿದರು.