ಮುಂದಿನ ವಾರ ಎಚ್ಡಿಡಿ-ರಾಗಾ ಚರ್ಚೆ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ರಾಜ್ಯದಲ್ಲಿ ಒಟ್ಟಾಗಿ ಹೋರಾಟ ನಡೆಸಲಿರುವ ಹಿನ್ನೆಲೆಯಲ್ಲಿ ಸಂಸತ್ ಕ್ಷೇತ್ರಗಳ ಹಂಚಿಕೆ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಮುಂದಿನ ವಾರ ಚರ್ಚೆ ನಡೆಸಲಿದ್ದಾರೆ.

ಈಗಾಗಲೇ 12 ಕ್ಷೇತ್ರಗಳು ಬೇಕೆಂಬ ಬೇಡಿಕೆಯನ್ನು ಜೆಡಿಎಸ್ ವರಿಷ್ಠರೇ ಮಾಧ್ಯಮಗಳ ಮೂಲಕ ಇರಿಸಿದ್ದರಾದರೂ, ಕಾಂಗ್ರೆಸ್​ನ ಹಾಲಿ ಸಂಸದರು ಹಾಗೂ ಪಕ್ಷಕ್ಕೆ ಅನುಕೂಲಕರ ಎನ್ನಲಾದ ಕ್ಷೇತ್ರಗಳನ್ನು ಬಿಟ್ಟು ಕೊಡಲು ರಾಜ್ಯ ಕೈ ನಾಯಕರು ಸಿದ್ಧರಿಲ್ಲ. ಹೀಗಾಗಿ ಜೆಡಿಎಸ್​ಗೆ 8 ಕ್ಷೇತ್ರ ಬಿಟ್ಟು ಕೊಡುವ ನಿರೀಕ್ಷೆ ಇದೆ.

ಕಳೆದ ವಾರವಷ್ಟೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ನಾಯಕರಿಗೆ ಸೀಟು ಹಂಚಿಕೆ ಸಂಬಂಧ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಬರುವ ಸೋಮವಾರದ ವೇಳೆಗೆ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆ ಸೇರಿ ರಾಹುಲ್ ಭೇಟಿ ಮಾಡಲಿದ್ದಾರೆ. ಬಳಿಕ ರಾಹುಲ್ ದೇವೇಗೌಡರ ಜತೆ ಮಾತನಾಡಲಿದ್ದಾರೆ. ಮೂಲಗಳ ಪ್ರಕಾರ, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಶಿವಮೊಗ್ಗ, ವಿಜಯಪುರ, ಬೀದರ್ ಹಾಗೂ ರಾಯಚೂರು ಕ್ಷೇತ್ರಗಳನ್ನು ಬಿಟ್ಟು ಕೊಡುವ ಬಗ್ಗೆ ಒಂದು ಹಂತದ ಚರ್ಚೆ ನಡೆದಿದೆ. ತುಮಕೂರು ಕ್ಷೇತ್ರಕ್ಕೆ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಮೈಸೂರು, ತುಮಕೂರು ಬಿಟ್ಟು ಕೊಡಲು ಕಾಂಗ್ರೆಸ್ ಒಪು್ಪವುದು ಕಷ್ಟಸಾಧ್ಯ. ಹಾಗಾಗಿ ಮೂರು ಪರ್ಯಾಯ ಕ್ಷೇತ್ರಗಳತ್ತಲೂ ಜೆಡಿಎಸ್ ದೃಷ್ಟಿ ಹಾಯಿಸಿದೆ.

ಜೆಡಿಎಸ್-ಕಾಂಗ್ರೆಸ್ ಜಂಟಿ ಪ್ರಚಾರ

ಸೀಟು ಹಂಚಿಕೆ ಅಂತಿಮವಾದ ಬಳಿಕ ರಾಜ್ಯದಲ್ಲಿ ಕನಿಷ್ಠ 18 ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಗೆಲ್ಲಿಸುವ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್ ಜಂಟಿಯಾಗಿ ರಾಜ್ಯಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳುವ ಕುರಿತು ಉಭಯ ಪಕ್ಷಗಳಲ್ಲಿ ಗಂಭೀರ ಚಿಂತನೆ ನಡೆದಿದೆ. ಕೆಲ ರ್ಯಾಲಿಗಳಲ್ಲಿ ರಾಹುಲ್ ಗಾಂಧಿ ಸೇರಿ ಕೆಲ ಸಮಾನ ಮನಸ್ಕ ಪಕ್ಷಗಳ ರಾಷ್ಟ್ರೀಯ ಮುಖಂಡರು ಕೂಡ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಈ ಬಗ್ಗೆಯೂ ಮುಂದಿನ ವಾರ ರಾಹುಲ್ ಜತೆ ದೇವೇಗೌಡರು ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.