ಮೊಮ್ಮಗನ ಲಗ್ನಪತ್ರಿಕೆಗೆ ಅಜ್ಜನಿಂದ ಪೂಜೆ!

>>

ವಿಜಯವಾಣಿ ಸುದ್ದಿಜಾಲ ಕೋಟ
ಪುರಾಣ ಪ್ರಸಿದ್ಧ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಪತ್ನಿ ಚೆನ್ನಮ್ಮ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕಾಪು ಮೂಳೂರು ಸಾಯಿರಾಧಾ ರೆಸಾರ್ಟ್‌ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಅವರು, ಕ್ಷೇತ್ರಕ್ಕೆ ಆಗಮಿಸಿ ಮಧ್ಯಾಹ್ನದ ಮಹಾಪೂಜೆ ಸಂದರ್ಭ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಮಹಾಪೂಜೆಗೆ ಕೊಟ್ಟ ಹಣ್ಣುಕಾಯಿ ತಟ್ಟೆಯಲ್ಲಿ ಮೊಮ್ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಕಿರಿಯ ಪುತ್ರಿ ಶೈಲಜಾ ಅವರ ಪುತ್ರ ಡಾ.ಅಮೋಘ್ ಮದುವೆ ಆಮಂತ್ರಣ ಪತ್ರಿಕೆಗೆ ಅರ್ಚಕರು ಪೂಜೆ ಸಲ್ಲಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುವಂತೆ, ಕೇಂದ್ರದಲ್ಲಿ ಮಹಾ ಘಟಬಂಧನ ಸರ್ಕಾರ ರಚನೆಯಾಗುವಂತೆ ದೇವೇಗೌಡರು ಪ್ರಾರ್ಥನೆ ಮಾಡಿದ್ದಾರೆ ಎನ್ನಲಾಗಿದೆ.
ಮೇ 16ರವರೆಗೆ ಕಾಪುವಿನಲ್ಲಿ ತಂಗಲಿರುವ ದೇವೇಗೌಡ ದಂಪತಿ ಉಡುಪಿಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ.ಕುಂದರ್ ಮಾಜಿ ಪ್ರಧಾನಿಯನ್ನು ಸ್ವಾಗತಿಸಿದರು. ಮಾಜಿ ಪ್ರಧಾನಿಗಳ ಆಪ್ತ ಸಹಾಯಕ ಅಂಜನೇಗೌಡ, ವ್ಯವಸ್ಥಾಪಕ ಜೈರಾಜ್ ವಿ.ಶೆಟ್ಟಿ, ವೈದ್ಯ, ಸಲಹಾ ತಜ್ಞ ಡಾ.ತನ್ಮಯ್ ಗೋಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ಕಾಂಗ್ರೆಸ್ ನಾಯಕರು ಇದ್ದರು.

ಪ್ರತಿ ಶುಕ್ರವಾರ ದೇವಿ ದೇವಸ್ಥಾನಗಳಿಗೆ ಪತ್ನಿ ಜತೆ ಭೇಟಿ ನೀಡುತ್ತಿದ್ದೇನೆ. ಮೇ 17ರವರೆಗೆ ದೇವಸ್ಥಾನಗಳಿಗೆ ಭೇಟಿ ಮುಂದುವರಿಯಲಿದೆ. ಆ ಪ್ರಯುಕ್ತ ಈ ವಾರ ಕೋಟ ಅಮೃತೇಶ್ವರಿ ದೇವಳಕ್ಕೆ ಭೇಟಿ ನೀಡಿದ್ದೇನೆ, ಹೊರತು ಬೇರಾವುದೇ ವಿಚಾರ ಕಲ್ಪಿಸಬೇಡಿ.
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ