ಯಾರೋ ಹಿಡಿದಿದ್ದ ಮೀನು ಖರೀದಿಸಿದ, ಮಾರಿ 7 ಸಾವಿರ ರೂ. ಲಾಭ ಗಳಿಸಿದ ಆತನ ಬೆನ್ನು ಬಿದ್ದ ಅಧಿಕಾರಿಗಳು!

ಗುವಾಹಟಿ: ಯಾರೋ ಹಿಡಿದು ತಂದಿದ್ದ ಬೃಹತ್​ ಗಾತ್ರದ ಬರಾಲಿ ಎಂಬ ಜಾತಿಯ ಮೀನನ್ನು ಮಾರಿ ಭಾರಿ ಲಾಭಗಳಿಸಿದ. ಆದರೀಗ ಪೊಲೀಸರು ಆತನ ಬೆನ್ನು ಬಿದ್ದಿದ್ದಾರೆ!

ಏನಿದು, ಆ ಮೀನು ಹಿಡಿದು ಮಾರಾಟ ಮಾಡಿದರೆ ಏನು ತಪ್ಪು? ಅದೇನಾದರೂ ಚಿನ್ನಾಭರಣವನ್ನು ಏನಾದರೂ ನುಂಗಿತ್ತಾ ಎಂಬ ಪ್ರಶ್ನೆಗಳು ಮನದಲ್ಲಿ ಮೂಡಬಹುದು. ಆದರೆ ಅಂಥದ್ದೇನೂ ಇಲ್ಲ.

ಆಗಿದ್ದೇನೆಂದರೆ, ಅಸ್ಸಾಂನಲ್ಲಿ ಈಗ ಮೀನುಗಳ ವಂಶಾಭಿವೃದ್ಧಿ ಸಮಯ. ಹಾಗಾಗಿ, ಸರ್ಕಾರ ಮೀನು ಹಿಡಿಯುವುದನ್ನು ನಿಷೇಧಿಸಿದೆ. ಆದರೂ ಯಾರೋ ಒಬ್ಬಾತ ಅಸ್ಸಾಂನ ಕೊಲಂಗೋ ಎಂಬ ನದಿಯಲ್ಲಿ ಬೃಹತ್​ ಗಾತ್ರದ ಬರಾಲಿ ಎಂಬ ಜಾತಿಯ ಮೀನನ್ನು ಯಾರೋ ಹಿಡಿದಿದ್ದರು. ಅದು 28 ಕೆ.ಜಿ. ಭಾರವಿತ್ತು. ಕೊಲಂಗೋಪಾರ್​ ಘಾಟ್​ ಬಳಿಯ ಮೀನು ಮಾರಾಟಗಾರನೊಬ್ಬ ಇದನ್ನು ಗುವಾಹಟಿಯ ಉಲುಬಾರಿ ಮೀನು ಮಾರುಕಟ್ಟೆಯ ವ್ಯಾಪಾರಿ ಶ್ಯಾಮಲ್​ ಎಂಬಾತನಿಗೆ 17 ಸಾವಿರ ರೂ.ಗೆ ಮಾರಾಟ ಮಾಡಿದ್ದ.

ಬೃಹತ್​ ಗಾತ್ರದ ಮೀನು ಮಾರುಕಟ್ಟೆಗೆ ಬಂದಿರುವ ಸುದ್ದಿ ತಿಳಿದು ಕೆಲವರು ಆ ಮೀನನ್ನು ನೋಡಲು ಬಂದರೆ, ಹಲವರು ಮೀನನ್ನು ಖರೀದಿಸಲು ಮುಂದಾದರು. ಕೆ.ಜಿ.ಗೆ 1ರಿಂದ 2 ಸಾವಿರ ರೂ.ನಂತೆ ಮಾರಾಟ ಮಾಡಿದ. ಅದರ ತಲೆ 7 ಕೆ.ಜಿ. ಇತ್ತು. ಅದನ್ನು ಕೆ.ಜಿ.ಗೆ 200ರಿಂದ 300 ರೂ.ನಂತೆ ಮಾರಾಟ ಮಾಡಿದ. ಹೀಗೆ ಆತ ತನ್ನ ಹೂಡಿಕೆಗಿಂತ 6ರಿಂದ 7 ಸಾವಿರ ರೂ. ಲಾಭ ಪಡೆದುಕೊಂಡ.

ಈ ವಿಷಯ ಕಾಮ್​ರೂಪ್​ ಜಿಲ್ಲೆಯ ಮೀನುಗಾರಿಕೆ ಅಧಿಕಾರಿಗಳ ಕಿವಿಗೆ ಬಿದ್ದಿತು. ಮೀನು ಹಿಡಿಯಲು ನಿಷೇಧವಿದ್ದರೂ ಮೀನು ಹಿಡಿದು ಮಾರಾಟ ಮಾಡಿದ್ದು ಹೇಗೆ ಎಂದು ಪ್ರಶ್ನಿಸಲು ಮುಂದಾದರು. ಆದರೆ, ಮೀನನ್ನು ಶ್ಯಾಮಲ್​ ಬೇರೊಬ್ಬರಿಂದ ಖರೀದಿಸಿ ತಂದಿದ್ದು ಎಂಬುದು ಗೊತ್ತಾಗಿ ಈಗ ಮೀನನ್ನು ಹಿಡಿದವನ ಪತ್ತೆ ಮುಂದಾಗಿದ್ದಾರೆ. ಇದಕ್ಕಾಗಿ ಪೊಲೀಸರ ನೆರವನ್ನೂ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *