ಬಸವಕಲ್ಯಾಣ: ಮನುಷ್ಯನ ಜೀವನದಲ್ಲಿ ಧರ್ಮ, ದೇವರು ಮತ್ತು ಗುರುವನ್ನು ಎಂದಿಗೂ ಸಹ ಮರೆಯಬಾರದು ಎಂದು ಸಂಸ್ಥಾನ ಗವಿಮಠದ ಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ನಗರದ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ಹಾಗೂ ಸದ್ಭಕ್ತರಿಂದ ಭಾನುವಾರ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನಮಾನವಿದೆ. ಗುರುಗಳು ಭಕ್ತರಿಗೆ ಅಧ್ಯಾತ್ಮದ ಬೋಧನೆ ನೀಡುತ್ತಿರುತ್ತಾರೆ. ಗುರುಗಳ ಋಣವನ್ನು ತೀರಿಸಲು ಆಗದು. ಭಕ್ತರು ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ ಎಂದರು.
ಭಕ್ತ ಗುರುವಿನ ನಿಜವಾದ ಶಿಷ್ಯನಾದರೆ ಮಾತ್ರ ಮೋಕ್ಷ ಪಡೆಯಬಹುದು. ಒಬ್ಬ ವ್ಯಕ್ತಿ ಅನೇಕ ಶಾಸ್ತçಗಳನ್ನು ಪುಸ್ತಕಗಳನ್ನು ಓದುತ್ತಿದ್ದರೂ ಸಹ ತನ್ನ ಗುರುಗಳಿಗೆ ತನ್ನನ್ನು ತಾನೇ ಒಪ್ಪಿಸಬೇಕಾಗುತ್ತದೆ. ಜೀವನದಲ್ಲಿ ಮೋಕ್ಷ, ಸುಖ, ಶಾಂತಿ, ಸಮೃದ್ಧಿಯನ್ನು ಪಡೆಯಲು ಗುರು ಭಕ್ತಿಯು ಸಹಾಯ ಮಾಡುತ್ತದೆ ಎಂದು ಹೇಳಿದರು.
ಗುರುಪಾದಪೂಜೆಯನ್ನು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪ್ರೊ.ಶಾಂತಲಿಂಗ ಮಠಪತಿ, ಶಿವಲೀಲಾ ಮಠಪತಿ ದಂಪತಿ ನೆರವೇರಿಸಿದರು.
ವೀರಯ್ಯಸ್ವಾಮಿ ವೈದಿಕ ಸೇವೆ ಹಾಗೂ ವಿವೇಕ ವಸ್ತçದ ಸಂಗೀತ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಎ.ಜಿ ಪಾಟೀಲ್, ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ, ಬಾಬುರಾವ ಚಳಕಾಪುರೆ, ಮಲ್ಲಿಕಾರ್ಜುನ ಅಲಗುಡೆ, ಶರಣಬಸಪ್ಪ ಪವಾಡಶೆಟ್ಟಿ, ರೇವಣಸಿದ್ದಯ್ಯ ವಸ್ತ್ರದ, ಶಾಂತವೀರ ಪೂಜಾರಿ, ಸದಾನಂದ ಕಣಜೆ, ಪ್ರೊರುದ್ರೇಶ್ವರ ಗೋರ್ಟಾ, ಶಿವಕುಮಾರ ಚಿಂಚೋಳಿ, ಶಿವಕುಮಾರ ಮುನ್ನೋಳಿ, ರಾಜಕುಮಾರ ಕಾಂಬಳೆ, ವಿನೋದ ಲಾಕೆ ಇದ್ದರು.