ಜಪ್ತಿ ಸೊತ್ತುಗಳಿಗಿಲ್ಲ ಬಿಡುಗಡೆ

ಧನಂಜಯ ಗುರುಪುರ
ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿರುವ ಮಳಲಿಯ ಗುಡ್ಡ ಪ್ರದೇಶದಲ್ಲಿ ವ್ಯವಸ್ಥೆಗೊಳಿಸಲಾದ ಜಪ್ತಿ ಸಂಗ್ರಹದ ಉಪಖನಿಜ ಸೊತ್ತುಗಳ ಯಾರ್ಡ್‌ನಲ್ಲಿ 50ಕ್ಕೂ ಮೇಲ್ಪಟ್ಟು ಟಿಪ್ಪರ್- ಲಾರಿಗಳು, ಸಾವಿರಾರು ಲೋಡ್ ಮರಳು, ಡ್ರೆಜ್ಜಿಂಗ್ ಯಂತ್ರಗಳು, ಉಕ್ಕು ಹಾಗೂ ಫೈಬರ್ ಬೋಟುಗಳು ಬಿಡುಗಡೆ ಭಾಗ್ಯ ಕಾಣದೆ ಮೂಲೆಗುಂಪಾಗುತ್ತಿವೆ.

ಅಲ್ಲಲ್ಲಿ ಅಕ್ರಮ ಸಾಗಾಟದ ಮರಳು, ಕೆಂಪುಕಲ್ಲು, ಜಲ್ಲಿಕಲ್ಲು ಸಾಗಾಟ ಲಾರಿಗಳನ್ನು ಜಪ್ತಿ ಮಾಡಿರುವ ಮಂಗಳೂರು ವ್ಯಾಪ್ತಿ ಪೊಲೀಸರು, ಅವೆಲ್ಲವನ್ನೂ ಮಳಲಿ ಯಾರ್ಡ್‌ನಲ್ಲಿ ಡಂಪ್ ಮಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸುಪರ್ದಿಗೆ ಹಸ್ತಾಂತರಿಸಿದ್ದಾರೆ. ಇಲ್ಲಿ 2017ರಿಂದಲೂ ಜಪ್ತಿ ಮಾಡಲಾದ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಸೊತ್ತುಗಳಿವೆ ಎಂದು ಬಜ್ಪೆ ಪೊಲೀಸ್ ಠಾಣಾ ವಿಶ್ವಸನೀಯ ಮೂಲವೊಂದು ತಿಳಿಸಿದೆ.
ವಿಶಾಲ ಗುಡ್ಡ ಪ್ರದೇಶದಲ್ಲಿ ಎಲ್ಲಿ ನೋಡಿದರಲ್ಲಿ ಇನ್ನೇನು ತುಕ್ಕು ಹಿಡಿಯಲಿರುವ ಲಾರಿಗಳು, ಉಕ್ಕಿನ ದೋಣಿಗಳು, ಡ್ರೆಜ್ಜಿಂಗ್ ಯಂತ್ರಗಳು ತುಂಬಿವೆ. ಕೆಲವು ಲಾರಿಗಳಲ್ಲಿ ಜಲ್ಲಿ, ಕೆಂಪುಕಲ್ಲು, ಮರಳು ತುಂಬಿಕೊಂಡಿವೆ. ಲಾರಿ ಬಿಡಿಸಿಕೊಂಡು ಹೋದವರ ಅಕ್ರಮ ಮರಳು ಮಾತ್ರ ಇಲ್ಲೇ ರಾಶಿ ಬಿದ್ದಿದೆ.
ಇಲ್ಲಿ ಸಂಗ್ರಹವಾಗಿರುವ ಉಪಖನಿಜ ಸೊತ್ತುಗಳು ಮತ್ತು ಯಂತ್ರೋಪಕರಣಗಳ ಪೈಕಿ ಅಧಿಕಾಂಶ ಜಪ್ತಿ ಕಾರ್ಯಾಚರಣೆ ಬಜ್ಪೆ ಪೊಲೀಸರಿಂದ ನಡೆದಿದೆ. ಉಳಿದಂತೆ ಇಲ್ಲಿ ಮಂಗಳೂರು ವ್ಯಾಪ್ತಿಯ ಕೊಣಾಜೆ, ಉಳ್ಳಾಲ, ಕಾವೂರು, ಪಣಂಬೂರು, ಮಂಗಳೂರು ಗ್ರಾಮಾಂತರ(ವಾಮಂಜೂರು) ಹಾಗೂ ಕಂಕನಾಡಿ ಪೊಲೀಸರು ಮುಟ್ಟಗೋಲು ಹಾಕಿರುವ ಕೆಲವು ಮರಳು ತುಂಬಿದ ಲಾರಿಗಳು ಮತ್ತು ಬೋಟುಗಳು ಸೇರಿಕೊಂಡಿವೆ.

ನಿರ್ದಿಷ್ಟ ಜಪ್ತಿ ಮಾಹಿತಿ
2017ರಲ್ಲಿ ಪೊಲೀಸರು 24 ಟಿಪ್ಪರ್ ಹಾಗೂ 24 ಲೋಡ್ ಮರಳು ಜಪ್ತಿ ಮಾಡಿದ್ದರೆ, ಗಣಿ ಇಲಾಖೆಯವರು 8 ಟಿಪ್ಪರ್ ಹಾಗೂ 1,211 ಟನ್ ಮರಳು ಮುಟ್ಟುಗೋಲು ಹಾಕಿದ್ದಾರೆ. 2018ರಲ್ಲಿ ಪೊಲೀಸರು 15 ಟಿಪ್ಪರ್, 1695 ಟನ್ ಮರಳು, ಒಂದು ಬೋಟ್, ಒಂದು ಡ್ರೆಜ್ಜಿಂಗ್ ಯಂತ್ರ ವಶಪಡಿಸಿಕೊಂಡಿದ್ದಾರೆ. ಇದೇ ಅವಧಿಗೆ ಪೊಲೀಸ್ ಮತ್ತು ಗಣಿ ಇಲಾಖೆ ಜಂಟಿಯಾಗಿ ಒಂದು ಬೋಟ್, ಒಂದು ಡ್ರೆಜ್ಜಿಂಗ್ ಮಷಿನ್ ವಶಪಡಿಸಿಕೊಂಡಿದೆ. 2019ರಲ್ಲಿ ಪೊಲೀಸರು 16 ಟಿಪ್ಪರ್, 16 ಲೋಡ್ ಮರಳು ಹಾಗೂ ಪೊಲೀಸರು ಮತ್ತು ಗಣಿ ಇಲಾಖೆ ಜಂಟಿಯಾಗಿ 37 ಬೋಟ್, 96 ಲೋಡ್ ಮರಳು, ಒಂದು ಡ್ರೆಜ್ಜಿಂಗ್ ಮಷಿನ್, ಒಂದು ಕೆಂಪುಕಲ್ಲು ಕಟ್ಟಿಂಗ್ ಯಂತ್ರ, 20,000 ಕೆಂಪು ಕಲ್ಲು ಜಪ್ತಿ ಮಾಡಿ ಯಾರ್ಡ್‌ನಲ್ಲಿ ಜಮೆ ಮಾಡಿದೆ.

ನಿರ್ದಿಷ್ಟ ಅವಧಿಯಲ್ಲಿ ಈ ಸೊತ್ತುಗಳನ್ನು ಬಿಡಿಸಿಕೊಂಡು ಹೋಗಬೇಕಾಗುತ್ತದೆ. ಇಲ್ಲವಾದಲ್ಲಿ ಗಣಿ ಇಲಾಖೆ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಪೊಲೀಸರು ತಮ್ಮ ವ್ಯಾಪ್ತಿಯ ಕರ್ತವ್ಯದೊಂದಿಗೆ ಅಕ್ರಮ ಸಾಗಾಟದ ಇಂತಹ ಸೊತ್ತುಗಳ ಮೇಲೂ ಕಣ್ಣಿಡಬೇಕಾಗುತ್ತದೆ. ಆದರೆ ಸಂಬಂಧಿತ ಎಲ್ಲ ಇಲಾಖೆಗಳು ಚುರುಕಿನ ಕಾರ್ಯಾಚರಣೆ ನಡೆಸಿದಲ್ಲಿ ಅಕ್ರಮ ದಂಧೆ ಸುಲಭವಾಗಿ ತಡೆಗಟ್ಟಬಹುದು.
ಪರಶಿವಮೂರ್ತಿ, ಬಜ್ಪೆ ಪೊಲೀಸ್ ಠಾಣಾಧಿಕಾರಿ

Leave a Reply

Your email address will not be published. Required fields are marked *