ಮುಂದಿನ ವರ್ಷಕ್ಕೆ ಗುರುಪುರ ಹೊಸ ಸೇತುವೆ ಲಭ್ಯ

ಧನಂಜಯ ಗುರುಪುರ

ಗುರುಪುರದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ, ಹಳೇ ಸೇತುವೆಗೆ ಪರ್ಯಾಯ ಹಾಗೂ ಸಮಾನಾಂತರದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಈಗ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಸೇತುವೆ ಕಾಮಗಾರಿ ಮುಂದಿನ ವರ್ಷದ ಮೇ ತಿಂಗಳಲ್ಲಿ ಶೇ.90ರಷ್ಟು ಪೂರ್ಣಗೊಂಡು ಬಳಿಕ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.

ಒಂದೂವರೆ ತಿಂಗಳಿಂದ ಸೇತುವೆ ಕಾಮಗಾರಿ ಮುಂದುವರಿದಿದ್ದು, ಈಗ ಪಿಲ್ಲರುಗಳಿಗಾಗಿ ಭೂಮಿ ಕೊರೆಯುವ ಕೆಲಸ ನಡೆಯುತ್ತಿದೆ. ಪ್ರತಿದಿನ 30ರಷ್ಟು ಮಂದಿ ಇಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಾಮಗಾರಿ ನಡೆಸುತ್ತಿದ್ದಾರೆ.

ಈಗಾಗಾಲೇ ಹಲವು ರಸ್ತೆ, ಸೇತುವೆ ಕಾಮಗಾರಿ ನಡೆಸಿರುವ ಸುಧಾಕರ ಶೆಟ್ಟಿ ಅವರ ಮೊಗರೋಡಿ ಕನ್‌ಸ್ಟ್ರಕ್ಷನ್ಸ್ ಸಂಸ್ಥೆ ಈ ಸೇತುವೆ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದೆ. ಸೇತುವೆಗಾಗಿ ಈಗ ಎರಡು ಸಮಾನಂತರ ಸ್ಥಳದಲ್ಲಿ ಪಿಲ್ಲರಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ನಡೆಸುವುದಕ್ಕಿಂತ ಮುಂಚೆ ನದಿಗೆ ಅಡ್ಡಲಾಗಿ ಮಣ್ಣು ಹಾಕಿ ಬಂಡು ನಿರ್ಮಿಸಲಾಗಿದೆ. ಈ ಬಂಡುವಿನ ಮೇಲೆಯೇ ಪಿಲ್ಲರುಗಳ ನಿರ್ಮಾಣ ಕಾರ್ಯ ಮುಂದುವರಿದಿದ್ದು, ಮುಂಬರುವ ಮಳೆಗಾಲಕ್ಕೆ ಮುಂಚೆ ಪಿಲ್ಲರು, ಕ್ಯಾಪ್ ಮತ್ತು ಪೀಯರ್ಸ್‌ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಒಂದೊಂದು ಪಿಲ್ಲರ್ ಆಳ 18 ಮೀ. ಆಗಿದ್ದು, ಕೊಳವೆ ಸುತ್ತಳತೆ 1.2 ಡಯಾ ಮೀಟರ್ ಆಗಿರುತ್ತದೆ. ಫಿಲ್ಲರ್ ಹಾಕಲಾದ ಕಡೆಯಲ್ಲಿ ಭೂಮಿಯೊಳಗೆ ಬಂಡೆ ಕಲ್ಲು ಸಿಕ್ಕಿದ್ದು, ಒಂದು ಕಡೆ ಸಿಕ್ಕರುವ ಕಠಿಣ ಬಂಡೆ ಕತ್ತರಿಸಲು ವಿಶೇಷ ಪರಿಶ್ರಮ ಪಡಲಾಗಿದೆ ಎಂದು ಕಾಮಗಾರಿ ಸ್ಥಳದಲ್ಲಿದ್ದ ಉತ್ತರ ಪ್ರದೇಶದ ಗೋರಖ್ಪುರದ ಕಾರ್ಮಿಕರೊಬ್ಬರು ತಿಳಿಸಿದ್ದಾರೆ.

ಸೇತುವೆ ವಿನ್ಯಾಸ: ಮಂಗಳೂರು-ಮೂಡುಬಿದಿರೆ 169ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಯು 39.420 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ಹೊಸ ಸೇತುವೆ 175 ಮೀ. ಉದ್ದ, 16 ಮೀಟರ್ ಅಗಲ, ಕ್ಯಾರೇಜ್(ಸಾಗಾಟ) ಅಗಲ 10 ಮೀ., ಕಾಲುದಾರಿ ಅಗಲ 3 ಮೀ(ಎರಡು ಕಡೆ) ಆಗಿದ್ದರೆ, ಅಡಿಪಾಯವು ಫೈಲ್ ಫೌಂಡೇಶನ್ ಆಗಿರುತ್ತದೆ. ಮೇಲ್ಭಾಗಕ್ಕೆ ಗಾರ್ಡರ್ ಬೀಂ ಮತ್ತು ಸ್ಲ್ಯಾಬ್ ಹಾಸಲಾಗುತ್ತದೆ. ಎರಡೂ ಕಡೆಯಿಂದ ಕೂಡುರಸ್ತೆ 500 ಮೀ. ಕಾಮಗಾರಿ ಪೂರ್ಣಗೊಳಿಸಬೇಕಾದ ಅವಧಿ ಎರಡು ವರ್ಷ.

ಮಳೆಗಾಲ ಆರಂಭಕ್ಕೆ ಮುಂಚೆ ಪಿಲ್ಲರ್ ಮತ್ತು ಅದಕ್ಕೆ ಸಂಬಂಧಿತ ಕಾಮಗಾರಿ ಪೂರ್ಣಗೊಳಿಸಲಾಗುವುದು. 2020ರ ಮೇ ತಿಂಗಳಲ್ಲಿ ಸ್ಲ್ಯಾಬ್ ಅಳವಡಿಸುವ ಕಾಮಗಾರಿಗಳೊಂದಿಗೆ ಶೇ.90-95ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗುವುದು. ಒಂದು ಬಲಿಷ್ಠ ಸೇತುವೆ ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ನಮ್ಮ ಕಂಪನಿ ಮುತುವರ್ಜಿ ವಹಿಸಿದೆ.
-ಸುಧಾರಕ ಶೆಟ್ಟಿ, ಗುತ್ತಿಗೆ ಕಂಪನಿ ಮಾಲೀಕ