ಹೆದ್ದಾರಿಯಲ್ಲೇ ಬಸ್ ಬವಣೆ!

ಗುರುಪುರ: ಅಗಲ ಕಿರಿದಾದ, ಹೊಂಡಗುಂಡಿ ಹಾಗೂ ನಿಗದಿತ ಸಮಯದಲ್ಲಿ ಡಾಂಬರು ಕಾಣದ ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ದುರವಸ್ಥೆ ಒಂದೆಡೆಯಾದರೆ, ಪ್ರಯಾಣಿಕರಿಗೆ ರಾತ್ರಿ ಎಂಟೂವರೆ ಗಂಟೆ ಕಳೆದರೆ ಬಸ್ ಸೌಕರ್ಯ ಇಲ್ಲದಿರುವುದು ಜನರನ್ನು ಹೈರಾಣಾಗಿಸಿದೆ.

ಹೆದ್ದಾರಿ ಎಂದ ಮೇಲೆ ಸಾಮಾನ್ಯವಾಗಿ ರಾತ್ರಿ ಕನಿಷ್ಠ ಒಂಬತ್ತು ಗಂಟೆವರೆಗಾದರೂ ಬಸ್ ಸೇವೆ ಇರಬೇಕು. ಆದರೆ ಗುರುಪುರ ಕೈಕಂಬದಿಂದ ಮಂಗಳೂರಿಗೆ ರಾತ್ರಿ 8.45ರ ಬಳಿಕ ಬಸ್ಸೇ ಇಲ್ಲ. ಮೂಡುಬಿದಿರೆಯಿಂದ ಮಂಗಳೂರಿಗೆ ಸಾಗುವ ಜೈನ್ ಟ್ರಾವೆಲ್ಸ್ ಗುರುಪುರ ಕೈಕಂಬದಲ್ಲಿ ರಾತ್ರಿಯ ಕೊನೆಯ ಬಸ್. ಇದು ಗುರುಪುರದಲ್ಲಿ ರಾತ್ರಿ 8.50-55ರ ಸುಮಾರಿಗೆ ಸಾಗುತ್ತದೆ. ಒಂದೊಮ್ಮೆ ಈ ಬಸ್ ಬರದಿದ್ದರೆ ದೇವರೇ ಗತಿ. ಅದರಲ್ಲೂ ದೊಡ್ಡ ನಗರ ಎಂಬ ಭಾವದಿಂದ ದೂರದಿಂದ ಬಂದು ಇಲಿ ಬಸ್ ಕಾದರೆ ಆಮೇಲೆ ಖಾಸಗಿ ವಾಹನವನ್ನೇ ಅವಲಂಬಿಸಬೇಕಾದ ಸ್ಥಿತಿ. ಬಜ್ಪೆ, ಮೂಡುಬಿದಿರೆ, ಬಿ.ಸಿ.ರೋಡ್(ವಯಾ ಪೊಳಲಿ) ಮೂಲಕ ಕೈಕಂಬಕ್ಕೆ ಆಗಮಿಸುವ ಜನ ಇಲ್ಲಿಂದ ಮಂಗಳೂರಿಗೆ ಪ್ರಯಾಣಿಸಬೇಕಾದಲ್ಲಿ ದುಬಾರಿ ರಿಕ್ಷಾ ಇಲ್ಲವೇ ಟ್ಯಾಕ್ಸಿ ಹಿಡಿಯಬೇಕಾಗುತ್ತದೆ. ಒಟ್ಟಾರೆ ರಾತ್ರಿ ಎಂಟು ಗಂಟೆ ಕಳೆದರೆ ಗುರುಪುರ ಕೈಕಂಬದಲ್ಲಿ ಬಸ್‌ನ ಆತಂಕ ಶುರುವಾಗುತ್ತದೆ.

ಅಭಿವೃದ್ಧಿ ಹೊಂದುತ್ತಿರುವ ಕೈಕಂಬಕ್ಕೆ ರಾತ್ರಿ ವೇಳೆ ಮೂರೂ ಕಡೆಯಿಂದಲೂ ಜನ ಆಗಮಿಸುತ್ತಿರುತ್ತಾರೆ. ಕೆಲವರು ಇಲ್ಲಿ ಬಸ್ ಕಾದು ಗುರುಪುರ, ಪೊಳಲಿಗೆ ನಡೆದುಕೊಂಡು ಹೋಗುವವರೂ ಇದ್ದಾರೆ. ಕೆಲವರು ದುಬಾರಿ ಬಾಡಿಗೆ ತೆತ್ತು ರಿಕ್ಷಾದಲ್ಲೋ ಟ್ಯಾಕ್ಸಿಯಲ್ಲೋ ಪ್ರಯಾಣಿಸುತ್ತಾರೆ. ಕೆಲವರು ರಸ್ತೆ ಮಧ್ಯೆ ಸಿಕ್ಕ ವಾಹನಗಳಲ್ಲಿ ಮನೆ ಸೇರುವುದುಂಟು. ಇದು ಕಾಲದ ಅನಿವಾರ್ಯತೆ! ಪ್ರಸಕ್ತ ಇಲ್ಲಿ ರಾತ್ರಿ 9ರವರೆಗೆ ಸಾರ್ವಜನಿಕ ವಾಹನ ವ್ಯವಸ್ಥೆ ಅಗತ್ಯವಿದೆ. ಆದರೆ ಇಷ್ಟೊಂದು ಮುಂದುವರಿದ ಹಾಗೂ ರಾಷ್ಟ್ರೀಯ ಹೆದ್ದಾರಿ ಎಂದು ನಾಮಕರಣಗೊಂಡಿರುವ ಇಲ್ಲೇ(ಕೈಕಂಬದಿಂದ ಮಂಗಳೂರಿಗೆ) ರಾತ್ರಿ ವೇಳೆ ಸ್ಥಳೀಯವಾಗಿ ಬಸ್ಸಿಲ್ಲ ಎಂದು ಕೈಕಂಬ ಬಸ್ ನಿಲ್ದಾಣದಲ್ಲಿದ್ದ ಕೆಲವು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುರ್ತು ಸಂದರ್ಭ ರಿಕ್ಷಾವೂ ಸಿಗದು: ರಾತ್ರಿ ಹೊತ್ತು ತುರ್ತು ಸಂದರ್ಭ ಕೈಕಂಬದಲ್ಲೂ ರಿಕ್ಷಾ ಮತ್ತು ಟ್ಯಾಕ್ಸಿ ಇರುವುದಿಲ್ಲ. ಕೆಲವರು ಬಸ್ ನಿಲ್ದಾಣದಲ್ಲೇ ರಾತ್ರಿ ಕಳೆದು ಮರುದಿನ ಮುಂದುವರಿಯುವವರಿದ್ದಾರೆ. ವಯೋವೃದ್ಧರು, ಕುಟುಂಬ ಸಮೇತ ಆಗಮಿಸುವವರು, ಮಕ್ಕಳು ಅಥವಾ ದೂರದ ಊರಿನ ಪ್ರಯಾಣಿಕರು ಎಷ್ಟೋ ಬಾರಿ ಇಲ್ಲಿ ಸಂಕಷ್ಟಕ್ಕೀಡಾದ ನಿದರ್ಶನವಿದೆ. ರೈಲು ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಕೈಕಂಬ, ಗುರುಪುರ ಮತ್ತು ವಾಮಂಜೂರಿನ ಒಂದಿಬ್ಬರು ಈ ವಿಷಯ ಹಿಂದೆಯೇ ಆರ್‌ಟಿಒ ಗಮನ ಸೆಳೆದಿದ್ದರೆ, ಕೆಲವರು ಜನಪ್ರತಿನಿಧಿಗಳಲ್ಲಿ ದೂರಿಕೊಂಡಿದ್ದಾರೆ. ಇದರಿಂದಲೂ ಪ್ರಯೋಜನವಾಗಿಲ್ಲ.

ಜನಪ್ರತಿನಿಧಿಗಳು ಹರಿಸಲಿ ಗಮನ: ಗುರುಪುರ -ಕೈಕಂಬ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಪ್ರಮುಖ ಸ್ಥಳವೇ. ಇಲ್ಲಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಶಿಕ್ಷಣ ಕ್ರಾಂತಿಯ ಮೂಡುಬಿದಿರೆ ಮೊದಲಾದ ಕಡೆ ಇಲ್ಲಿಂದ ಸಾಗುವವರೇ ಹೆಚ್ಚು. ಇಷ್ಟು ದೊಡ್ಡ ಜಂಕ್ಷನ್‌ನಲ್ಲಿ ರಾತ್ರಿ ಎಂಟುವರೆ ಗಂಟೆ ಕಳೆದರೆ ಬಸ್ ಇಲ್ಲದಿರುವುದು ನಿರ್ಲಕ್ಷೃ ವಹಿಸುವ ಸಂಗತಿಯಂತೂ ಅಲ್ಲ. ಈ ಬಗ್ಗೆ ಶಾಸಕರು, ಸಂಸದರು, ಜಿಲ್ಲಾ ಪಂಚಾಯಿತಿ ಸದಸ್ಯರು ಗಮನ ಹರಿಸಬೇಕು. ಕಡಿಮೆ ಪಕ್ಷ 9.30ರ ತನಕವಾದರೂ ಮಂಗಳೂರಿಗೆ ಕೈಕಂಬ ಭಾಗದಿಂದ ಒಂದು ಬಸ್ಸಾದರೂ ಇರುವಂತೆ ವ್ಯವಸ್ಥೆ ಮಾಡಿಕೊಡಲು ಆಸಕ್ತಿ ವಹಿಸಬೇಕು. ಕಾರುಗಳಲ್ಲೇ ಓಡಾಡುವ ಜನಪ್ರತಿನಿಧಿಗಳು ಜನರಿಗೆ ಈ ಭಾಗದಲ್ಲಿ ಬಸ್ ಇಲ್ಲದೆ ಆಗುತ್ತಿರುವ ಕಷ್ಟದ ಬಗ್ಗೆಯೂ ಯೋಚಿಸಬೇಕು. ಗುರುಪುರ, ಕೈಕಂಬ ಜಂಕ್ಷನ್ ನಾಲ್ವರು ಶಾಸಕರಿಗೆ ಪ್ರಮುಖವಾದುದು. ಮೂಲ್ಕಿ -ಮೂಡುಬಿದರೆ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಬಂಟ್ವಾಳ. ಈ ಬಾರಿಯ ನೀತಿಸಂಹಿತೆ ತೆರವಾದ ಮೇಲಾದರೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುವಂತೆ ಜನರ ಬೇಡಿಕೆ.

ಹಿಂದೊಂದು ಬಾರಿ ನಾನು ಗಂಜಿಮಠಕ್ಕೆ ಹೋದಾಗ ರಾತ್ರಿ 8.45ಕ್ಕೆ ಕೈಕಂಬಕ್ಕೆ ಬಂದು ಪೆರ್ಮಂಕಿಗೆ ಹೋಗಲು ಬಸ್ಸಿಗಾಗಿ ಕಾದಿದ್ದೆ. ರಾತ್ರಿ ಒಂಬತ್ತು ಗಂಟೆಯಾದರೂ ಬಸ್ ಬಂದಿಲ್ಲ. ಜೇಬಿನಲ್ಲಿ ಹಣವೂ ಇರಲಿಲ್ಲ. ಧೈರ್ಯ ಮಾಡಿಕೊಂಡು ನಡೆದುಕೊಂಡೇ ಮನೆ ತಲುಪಿದ್ದೇನೆ.
|ಉಳಾಯಿಬೆಟ್ಟು ನಿವಾಸಿ

ಕನಿಷ್ಠ ರಾತ್ರಿ ಒಂಬತ್ತು ಗಂಟೆಗೆ ಗುರುಪುರ ಕೈಕಂಬದಲ್ಲಿ ಮಂಗಳೂರಿನ ಲೋಕಲ್ ಬಸ್ ಸೇವೆ ಇರಬೇಕು. ರಾತ್ರಿ 8.45ರ ಬಸ್ ಕೈಕಂಬ ಜಂಕ್ಷನಿಗೆ ರಾತ್ರಿ 9ಕ್ಕೆ ತಲುಪುವಂಥ ವ್ಯವಸ್ಥೆ ಮಾಡಿದರೆ ಉತ್ತಮ. ಇಂಥ ವ್ಯವಸ್ಥೆಯಿಂದ ಪ್ರಯಾಣಿಕರ ಸಮಸ್ಯೆಗೆ ಒಂದಷ್ಟು ಪರಿಹಾರ ನೀಡಿದಂತಾಗುತ್ತದೆ.
|ಶಂಕರ್ ಶೆಟ್ಟಿ, ಸ್ಥಳೀಯ ಟ್ಯಾಕ್ಸಿ ಮಾಲೀಕ

Leave a Reply

Your email address will not be published. Required fields are marked *