More

    ಗುರುಪುರ ಸೇತುವೆ ಕೆಲಸ ವಿಳಂಬ

    ಗುರುಪುರ: ಫಲ್ಗುಣಿ ನದಿಗೆ ಅಡ್ಡಲಾಗಿ, ಹಳೇ ಸೇತುವೆಗೆ ಪರ್ಯಾಯವಾಗಿ ಗುರುಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಸೇತುವೆ ಕಾಮಗಾರಿ ಕ್ಷಿಪ್ರಗತಿಯಲ್ಲಿ ಮುಂದುವರಿದಿದ್ದು 2020ರ ಫೆಬ್ರವರಿ ಬದಲು ಏಪ್ರಿಲ್ ಮಧ್ಯಭಾಗ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
    ಗುರುಪುರ ಸೇತುವೆ 39.420 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರ ಉದ್ದ 175 ಮೀಟರ್. ಏಳು ಅಂಕಣ ಒಳಗೊಂಡಿರುವ ಸೇತುವೆಯ ಮೇಲ್ಭಾಗದಲ್ಲಿ ಗರ್ಡರ್ ಅಳವಡಿಸುವ ಕೆಲಸ ಮುಂದುವರಿದಿದೆ. ಗುರುಪುರ ಕಡೆಯ ಎರಡು ಅಂಕಣಗಳ ಮಧ್ಯೆ ತಲಾ ಐದೈದು ಹಾಗೂ ಮಧ್ಯದ ಅಂಕಣಗಳ ಮಧ್ಯೆ ಕೆಲವು ಗರ್ಡರ್‌ಗಳನ್ನು ಅಳವಡಿಸಲಾಗಿದೆ. ಒಟ್ಟು 35 ಗರ್ಡರ್ ಅಳವಡಿಕೆ ಮುಗಿದ ಬಳಿಕ ಗರ್ಡರ್‌ಗಳ ಮಧ್ಯೆ 1400ರಷ್ಟು ಸ್ಲ್ಯಾಬ್ ಅಳವಡಿಸಿ, ಮೇಲ್ಗಡೆ ಸೆಂಟ್ರಿಂಗ್ ಹಾಸಿ, ಡಾಂಬರು ಹಾಕಲಾಗುತ್ತದೆ. ಪರಾರಿ(ಮಂಗಳೂರು) ಭಾಗದಲ್ಲಿ ಸಿದ್ಧಪಡಿಸಲಾದ ಗರ್ಡರ್‌ಗಳನ್ನು ಅಳವಡಿಸುವ ಕೆಲಸ ಮುಂದಿನ ವಾರ ಆರಂಭಗೊಳ್ಳಲಿದೆ. ಇದಕ್ಕಾಗಿ ಎರಡೂ ಕಡೆ ಅತ್ಯಾಧುನಿಕ ಲಾಂಚರ್ ನಿರ್ಮಿಸಲಾಗಿದೆ.

    ಹೊಸ ಸೇತುವೆ ನಿರ್ಮಾಣಕ್ಕೆ ಕನಿಷ್ಠ ಎರಡು ವರ್ಷ ಬೇಕು ಎಂದು ಗುದ್ದಲಿಪೂಜೆ ಸಂದರ್ಭ ಸಂಸದ ನಳಿನ್ ಕುಮಾರ್ ಹೇಳಿದ್ದರೂ, ಒಂದೂವರೆ ವರ್ಷದೊಳಗೆ ಕೆಲಸ ಮುಗಿಸಿ, 2020ರ ಫೆಬ್ರವರಿಯಲ್ಲಿ ಸೇತುವೆ ಲೋಕಾರ್ಪಣೆಗೆ ಸಿದ್ಧಪಡಿಸಲಿದ್ದೇವೆ ಎಂದು ಗುತ್ತಿಗೆದಾರ ಕಂಪನಿ(ಮುಗ್ರೋಡಿ ಕನ್‌ಸ್ಟ್ರಕ್ಷನ್ ಕಾವೂರು) ಭರವಸೆ ನೀಡಿತ್ತು. ಆದರೆ ವಿಪರೀತ ಮಳೆ ಹಾಗೂ ಇತರ ತಾಂತ್ರಿಕ ಅಡಚಣೆಗಳಿಂದ ಸೇತುವೆ ಲೋಕಾರ್ಪಣೆ ವಿಳಂಬವಾಗುತ್ತಿದೆ.

    ಎರಡೂ ಕಡೆ ಹೆದ್ದಾರಿ ವಿಸ್ತರಣೆ: ಸೇತುವೆಯ ಎರಡೂ ಪಾರ್ಶ್ವಗಳಲ್ಲಿ ಹೆದ್ದಾರಿ ವಿಸ್ತರಣೆ(ತಲಾ 500 ಮೀಟರ್) ಕಾಮಗಾರಿ ನಡೆಯುತ್ತಿದೆ. ಪರಾರಿ(ಮಂಗಳೂರು) ಭಾಗದಲ್ಲಿ ಹೆದ್ದಾರಿ 500 ಮೀಟರ್ ವಿಸ್ತರಣೆ ಪೂರ್ಣಗೊಂಡಿದೆ. ಗುರುಪುರ ಭಾಗದಲ್ಲಿ ಹೆದ್ದಾರಿ 500 ಮೀಟರ್ ವಿಸ್ತರಣೆ ಕಾಮಗಾರಿ ಮುಂದುವರಿದಿದೆ. ಹೆದ್ದಾರಿ ವಿಸ್ತರಣೆ ಭಾಗಗಳಲ್ಲಿ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್ ಸ್ಥಳಾಂತರಿಸಲಾಗಿದೆ. ಕೆಲವು ಕಡೆ ರಸ್ತೆಗೆ ಅಡ್ಡಲಾಗಿ ಮೋರಿ ನಿರ್ಮಿಸಲಾಗುತ್ತಿದೆ.

    ಸೇತುವೆ ನಿರ್ಮಾಣ ವಿಳಂಬಕ್ಕೆ ಕೆಲವು ಕಾರಣಗಳಿವೆ. ಹೊಸ ಸೇತುವೆಯ ಎರಡೂ ಕಡೆ(ಅತ್ತ ಗುರುಪುರ, ಇತ್ತ ಪರಾರಿ(ಮಂಗಳೂರು ಭಾಗ) 500 ಮೀಟರ್ ಉದ್ದಕ್ಕೆ ರಾಷ್ಟ್ರೀಯ ಹೆದ್ದಾರಿ(169) ಚತುಷ್ಪಥಗೊಳ್ಳುತ್ತಿದ್ದು, ರಸ್ತೆ ವಿಸ್ತರಣೆ ಸಂದರ್ಭ ಭೂಸ್ವಾಧೀನ ಸಮಸ್ಯೆ ಎದುರಾಗಿ ಸೇತುವೆ ಕಾಮಗಾರಿ ಒಂದಷ್ಟು ವಿಳಂಬಗೊಂಡಿದೆ. ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಯಲಿದೆ. ಏಪ್ರಿಲ್ ಮಧ್ಯಭಾಗದಲ್ಲಿ ಗುರುಪುರ ಹೊಸ ಸೇತುವೆ ಲೋಕಾರ್ಪಣೆಗೊಳ್ಳಲಿದೆ.
    ಸುಧಾಕರ ಶೆಟ್ಟಿ
    ಸೇತುವೆ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿ ಮಾಲೀಕ

    ಸೇತುವೆ ನಿರ್ಮಾಣ ಪೂರ್ಣಗೊಳ್ಳುವ ಕಾರ್ಯ ನಿಗದಿತ ಸಮಯಕ್ಕಿಂತ ಎರಡು ತಿಂಗಳು ವಿಳಂಬವಾಗುತ್ತಿದೆ. 2019ರ ಫೆಬ್ರವರಿ 2ರಂದು ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆದಿದೆ. ಪ್ರಾಕೃತಿಕ ಅಡಚಣೆ ಹಾಗೂ ಇಲ್ಲೇ ಹೊಸ ಲಾಂಚರ್ ನಿರ್ಮಾಣ ಮಾಡಿರುವುದರಿಂದ ಗರ್ಡರ್ ಅಳವಡಿಕೆ ವಿಳಂಬವಾಗಿದೆ. ಗರ್ಡರ್ ಲಾಂಚರ್ ತಯಾರಿಗೆ ಅಂದಾಜು ಒಂದು ಕೋಟಿ ರೂ ಖರ್ಚಾಗಿದೆ. ಈಗಾಗಲೇ ಶೇ 70ರಷ್ಟು ಕೆಲಸ ಮುಗಿದಿದೆ. ಕಾಮಗಾರಿ ಪ್ರದೇಶದಲ್ಲಿ ಈಗ 50ರಿಂದ 70ರಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ. ಉಳಿದ ಕೆಲಸ ಮಾರ್ಚ್ ಕೊನೆಗೆ ಪೂರ್ಣಗೊಂಡು, ಏಪ್ರಿಲ್ ತಿಂಗಳಲ್ಲಿ ಹೊಸ ಸೇತುವೆ ವಾಹನ ಸಂಚಾರಕ್ಕೆ ತೆರವುಗೊಳ್ಳಲಿದೆ.
    ಸುಬ್ರಹ್ಮಣ್ಯ, ಕಂಪನಿಯ ಪ್ರಧಾನ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts