ಗುರುಕುಲ ಮಾದರಿ ವೇದ ಶಿಬಿರ

>

 
ಗಂಗಾಧರ ಕಲ್ಲಪಳ್ಳಿ ಸುಳ್ಯ
ಒಂದು ತಿಂಗಳ ಕಾಲ ವಿದ್ಯಾರ್ಥಿಗಳು ಯೋಗಿಗಳಂತೆ ಬದುಕಿ ಗುರುಕುಲ ಮಾದರಿಯಲ್ಲಿ ವೇದಾಧ್ಯಯನ ಮಾಡುತ್ತಾರೆ. ಆಧುನಿಕ ಯುಗದಲ್ಲೂ ಪ್ರಾಚೀನ ಕಾಲದ ಗುರುಕುಲ ಸಂಪ್ರದಾಯ ನೆನಪಿಸುವ ಈ ವೇದ ಶಿಬಿರ ನಡೆಯುತ್ತಿರುವುದು ಸುಳ್ಯದ ಹಳೆಗೇಟಿನಲ್ಲಿ.
ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುವ ವೇದ ಯೋಗ ಕಲಾ ಶಿಬಿರಕ್ಕೀಗ 19ರ ಸಂಭ್ರಮ. ನಿತ್ಯ ನಿರಂತರ ಸಾಂಸ್ಕೃತಿಕ ಪ್ರವಾಹ ಹರಿಸಿ ಮಾನವೀಯ ಮೌಲ್ಯಗಳನ್ನು ಬಿತ್ತಿದ ವೇದ ಶಿಬಿರ 19 ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವೇದೋಪನಿಷತ್ತಿನ ಅಂತರಗಂಗೆಯನ್ನೇ ಹರಿಸಿದೆ. ಮಕ್ಕಳ ಬೇಸಿಗೆ ರಜೆ ಆರಂಭವಾದೊಡನೆ ಕೇಶವಕೃಪಾದಲ್ಲಿ ಆರಂಭಗೊಳ್ಳುವ ವೇದ ಶಿಬಿರ ತಿಂಗಳ ಕಾಲ ವೇದ-ಮಂತ್ರಗಳ ಅನುರಣನವುಂಟು ಮಾಡಿ ಹೊಸ ಚೈತನ್ಯ ಪಸರಿಸುವಂತೆ ಮಾಡುತ್ತಿದೆ.
ಪ್ರತಿಷ್ಠಾನ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ನಡೆಯುವ ಶಿಬಿರದಲ್ಲಿ ವೇದ ಮಂತ್ರಗಳ ಅನುರಣನ ಮಧ್ಯೆ ಸಾವಿರಾರು ವರ್ಷಗಳ ಹಿಂದಿನ ಭಾರತದ ದರ್ಶನ ಮಾಡಿಕೊಳ್ಳುವ ಮಕ್ಕಳು ಆಧುನಿಕ ಬೇಸಿಗೆ ಶಿಬಿರಗಳ ಹಾಡು, ಕುಣಿತ, ಅಭಿನಯ, ಜಾದುಗಳಲ್ಲೂ ಭಾಗವಹಿಸಿ ಸಂಭ್ರಮಿಸುತ್ತಾರೆ. ಯಕ್ಷಗಾನ ಭೂಮಿಯಲ್ಲಿ ರಾಮಾಯಣ ಮಹಾಭಾರತವನ್ನು ನೆನಪಿಸಿಕೊಳ್ಳುತ್ತಾರೆ. ಯೋಗಾಸನ, ಪ್ರಾಣಾಯಾಮಗಳ ಮೂಲಕ ಜೀವನ ಪದ್ಧತಿಯ ಆರೋಗ್ಯಕರ ಪಯಣ ಕಲಿಯುತ್ತಾರೆ. ಆದರ್ಶ ಪುರುಷರ ಜೀವನ, ರಾಷ್ಟ್ರಭಕ್ತಿಯ ಧ್ಯೇಯ ಮೈಗೂಡಿಸಿಕೊಳ್ಳುತ್ತಾರೆ. ಈಜಿನಲ್ಲಿ ಪರಿಣತಿ ಪಡೆಯುತ್ತಾರೆ. ಒಟ್ಟಿನಲ್ಲಿ ಹಳೆಯ ಕಾಲದ ಗುರುಕುಲ ಶಿಕ್ಷಣ ಪದ್ಧತಿ ಮೂಲಕ ವೇದಗಳನ್ನು ಉಚಿತವಾಗಿ ಕಲಿಸುವ ಮೂಲಕ ಕೇಶವಕೃಪಾ ವೇದ ಶಿಬಿರ ಇತರ ಶಿಬಿರಗಳಿಂದ ಭಿನ್ನತೆ ಕಾಯ್ದುಕೊಂಡಿದೆ.

ಸಂಪೂರ್ಣ ಉಚಿತ: ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಎಳೆಯ ಮಕ್ಕಳಿಗೆ ತಿಳಿಸಬೇಕೆಂದು ನಾಗರಾಜ ಭಟ್ ವೇದ ಶಿಬಿರ ಆರಂಭಿಸಿದರು. 16 ಮಕ್ಕಳೊಂದಿಗೆ ಆರಂಭವಾದ ಶಿಬಿರಕ್ಕೆ ಇಂದು ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಪೂರ್ಣ ಉಚಿತವಾಗಿ ನಡೆಯುವ ಶಿಬಿರದಲ್ಲಿ 120 ವಿದ್ಯಾರ್ಥಿಗಳಿಗೆ ವೇದ ಶಿಕ್ಷಣ ನೀಡಲಾಗುತ್ತಿದೆ. ಶಿಬಿರಕ್ಕೆ ಸೇರಿದವರು ಮೂರು ವರ್ಷ ನಿರಂತರ ಭಾಗವಹಿಸಿ ವೇದ ಅಧ್ಯಯನ ಪೂರ್ತಿಗೊಳಿಸಬೇಕು. ಪ್ರಥಮ ವರ್ಷಕ್ಕೆ 30 ವಿದ್ಯಾರ್ಥಿಗಳನ್ನಷ್ಟೇ ಸೇರ್ಪಡೆ ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿದ ಕಾರಣ ಈಗ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುತ್ತೇವೆ ಎನ್ನುತ್ತಾರೆ ಪ್ರತಿಷ್ಠಾನ ಅಧ್ಯಕ್ಷ ನಾಗರಾಜ ಭಟ್. ವೇದ-ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯಪುಸ್ತಕಗಳೂ, ವ್ಯಾಸಪೀಠ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ನಾಗರಾಜ ಭಟ್ ತಮ್ಮ ಮನೆಯಲ್ಲೇ ವಿದ್ಯಾರ್ಥಿಗಳಿಗೆ ವಸತಿ ಇತರೆ ವ್ಯವಸ್ಥೆಯನ್ನೂ ಕಲ್ಪಿಸುತ್ತಾರೆ.

ಮಕ್ಕಳ ಮನೋವಿಕಾಸಕ್ಕೆ ಕಾರ‌್ಯಕ್ರಮ: ಶಿಬಿರದಲ್ಲಿ ವೇದ ಪಾಠ ಮಾತ್ರವಲ್ಲದೆ ವೇದಾಂತರ್ಗತ ಜೀವನ ದರ್ಶನವನ್ನು ಜನಮಾನಸಕ್ಕೆ ಸಮರ್ಥವಾಗಿ ತಲುಪಿಸಲು ಮಾಧ್ಯಮವಾದ ಯೋಗಾಭ್ಯಾಸ, ಭಜನೆ, ಸಂಕೀರ್ತನೆಗಳು, ಹಾಡು-ಕುಣಿತ, ಮಕ್ಕಳಲ್ಲಿ ರಾಷ್ಟ್ರಪ್ರೇಮದ ಭಕ್ತಿ ತರಂಗ ಮೂಡಿಸುವ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಜಾದೂ, ಮಿಮಿಕ್ರಿ, ಮುಖವಾಡ ತಯಾರಿ, ಬೊಂಬೆ ತಯಾರಿ, ಮಾತುಗಾರಿಕೆ, ಜಾನಪದ ನೃತ್ಯಗಳು, ಹಾವುಗಳ ಮಾಹಿತಿ, ಯಕ್ಷಗಾನ, ರಂಗಪಾಠಗಳು, ರಂಗಗೀತೆ, ಚಿತ್ರಕಲೆ, ಪೊಲೀಸ್ ಮಾಹಿತಿ, ಆರೋಗ್ಯ ಮಾಹಿತಿ, ಅಗ್ನಿಶಾಮಕ ಪ್ರಾತ್ಯಕ್ಷಿಕೆ ಹೀಗೆ ಹಲವು ವಿಷಯಗಳನ್ನು ಕಲಿಸಿಕೊಡಲಾಗುತ್ತಿದೆ.

ಸರಣಿ ಶಿವಪೂಜೆ:  ವೇದ ಶಿಬಿರಗಳಲ್ಲಿ ಕಲಿತ ವೇದ ಮಂತ್ರಗಳು ಮರೆತು ಹೋಗಬಾರದು. ಅದು ಜೀವನದಲ್ಲಿ ಅಳವಡಿಕೆಯಾಗಬೇಕು ಎಂಬ ದೃಷ್ಟಿಯಿಂದ ವೇದ ಮಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗಾಗಿ ಸರಣಿ ಶಿವಪೂಜೆ ಹಮ್ಮಿಕೊಳ್ಳಲಾಗುತ್ತಿದೆ. ಶಿಬಿರದ ಎಲ್ಲ ವಿದ್ಯಾರ್ಥಿಗಳ ಮನೆಯಲ್ಲಿ ನಡೆಯುವ ಸರಣಿ ಶಿವಪೂಜೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಪೂಜೆ ಮಾಡುವ ವಿಧಾನಗಳನ್ನು ಕಲಿಸಿಕೊಡಲಾಗುತ್ತಿದೆ.

ವೇದ ಶಿಕ್ಷಣದಿಂದ ಮಗುವು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಲು ಸಹಕಾರಿಯಾಗುತ್ತದೆ. ವೇದ-ಉಪನಿಷತ್ತುಗಳ ಜ್ಞಾನ ಮತ್ತು ಆಲೋಚನೆ ಮನಸ್ಸನ್ನೂ, ಹೃದಯವನ್ನೂ ಶುಭ್ರಗೊಳಿಸುತ್ತದೆ. ವೇದ ಮಂತ್ರಗಳ ಕಲಿಕೆಗೆ ಹತ್ತಾರು ವರ್ಷಗಳೇ ಬೇಕಾಗಿರುವಾಗ 35 ದಿನಗಳ ವೇದ ಶಿಬಿರವು ವೇದಗಳೆಡೆಗೆ ಒಂದು ಕಿರು ನೋಟ ಮಾತ್ರ. 19 ವರ್ಷಗಳಿಂದ ಶಿಬಿರದ ಮೂಲಕ ವೇದ ಶಿಕ್ಷಣವನ್ನು ನೀಡಿ ನೂರಾರು ಸುಸಂಸ್ಕೃತ ವಿದ್ಯಾರ್ಥಿಗಳನ್ನು ತಯಾರಿಸಲು ಸಾಧ್ಯವಾಗಿದೆ ಎಂಬ ಹೆಮ್ಮೆ ಇದೆ.
ಪುರೋಹಿತ ನಾಗರಾಜ ಭಟ್,  ಅಧ್ಯಕ್ಷರು, ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ

Leave a Reply

Your email address will not be published. Required fields are marked *