ಗುರುಗುಂಟಾ: ಗ್ರಾಮದಲ್ಲಿ ಮೊಹರಂ ಹಿನ್ನೆಲೆಯಲ್ಲಿ ಸೈಯದ್ ಕಾಶಿಮ್ ಪೀರಲು ದೇವರ ಸಾತ್ ತಾರೀಕ್ ಕಾರ್ಯಕ್ರಮ ಭಾನುವಾರ ಸಂಜೆ ಮತ್ತು ಸೋಮವಾರ ನಸುಕಿನ ಜಾವ ವೈಭವದೊಂದಿಗೆ ಸಂಪನ್ನಗೊಂಡಿತು.
ಭಾನುವಾರ ಸಂಜೆ ಕಟ್ಟಿಗೆ ತುಂಡುಗಳಿಂದ ತುಂಬಿದ 27 ಚಕ್ಕಡಿಗಳನ್ನು ಪ್ರಮುಖ ಬೀದಿಯಿಂದ ಸೈಯದ್ ಕಾಸಿಂ ದರ್ಗಾದವರೆಗೆ ಇಮ್ಮಣ್ಣ ಹಿರೇಮನಿ ರೈತನ ಒಂಟಿ ಎತ್ತು ಎಳೆಯುವ ದೃಶ್ಯ ಮೊಹರಂ ಹಬ್ಬದ ಆರಂಭದ ಕಳೆಯನ್ನು ಹೆಚ್ಚಿಸಿತು. ಇದಕ್ಕೂ ಮುನ್ನ ಎಲ್ಲ ಚಕ್ಕಡಿಗಳನ್ನು ಹಗ್ಗಗಳಿಂದ ಒಂದಕ್ಕೊಂದು ಕಟ್ಟಿ ಜೋಡಿಸಲಾಗಿತ್ತು.
ನಂತರ ಎತ್ತನ್ನು ಇಮ್ಮಣ್ಣ ಹಿರೇಮನಿ ಮನೆಯಿಂದ ಮೆರವಣಿಗೆ ಮೂಲಕ ತಂದು ನೊಗಕ್ಕೆ ಕಟ್ಟಲಾಯಿತು. ಪ್ರಮುಖ ಬೀದಿಯಿಂದ ಅರ್ಧ ಕಿಲೋಮೀಟರ್ ದೂರದ ದರ್ಗಾದವರೆಗೆ ಒಂಟಿ ಎತ್ತು ಭಾರದ ಚಕ್ಕಡಿಗಳನ್ನು ಪ್ರಯಾಸವಿಲ್ಲದೆ ಎಳೆದು ನೋಡುಗ ಭಕ್ತರನ್ನು ರೋಮಾಂಚನಗೊಳಿಸಿತು.
ರಸ್ತೆಯ ಎರಡೂ ಬದಿ ಮತ್ತು ಕಟ್ಟಡಗಳ ಮೇಲೆ ನೆರೆದಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಹರ್ಷೋದ್ಘಾರ ಮತ್ತು ದೇವರ ಪರ ಕೂಗಿದ ಘೋಷವಾಕ್ಯಗಳು ಮುಗಿಲು ಮುಟ್ಟಿದವು. ಈ ದೃಶ್ಯ ಕಣ್ತುಂಬಿಕೊಳ್ಳಲು ನೆರೆ ಹೊರೆಯ ಹಳ್ಳಿಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಹೀಗಾಗಿ ಗ್ರಾಮದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಜನ ಕಾಣುತ್ತಿದ್ದರು.
ನಂತರ ಎಲ್ಲ ಚಕ್ಕಡಿಗಳ ಕಟ್ಟಿಗೆ ತುಂಡುಗಳನ್ನು ಅಗ್ನಿಕುಂಡಕ್ಕೆ ಹಾಕಿ ಬೆಳಗಿನವರೆಗೆ ದಹಿಸಲಾಯಿತು. ಸೋಮವಾರ ನಸುಕಿನ ಜಾವ ನಾಲ್ಕು ಗಂಟೆಯಿಂದ ಕುಂಟಬಂದಾವಲ್ಲಿ, ಹಳ್ಳದ ಲಾಲಸಾಬ್, ಚೋಪದಾರ್ ಲಾಲಸಾಬ್ ಪೀರಲು ದೇವರುಗಳನ್ನು ಹಿಡಿದ ಮುಜಾವರಗಳು ಮತ್ತು ಹರಕೆ ಹೊತ್ತ ಭಕ್ತರು ಕಿಚ್ಚನ್ನು ತುಳಿದು ಹರಕೆ ತೀರಿಸಿ ಭಕ್ತಿಯ ಪರಾಕಾಷ್ಟೆ ಮೆರೆದರು.
ಈ ಅಗ್ನಿಕುಂಡದ ಸುತ್ತ ಸಿಂಗರಿಸಿಕೊಂಡು ತಂದಿದ್ದ ಕೊಡೆಗಳೊಂದಿಗೆ ರೈತರು ಕೈ ಕೈ ಹಿಡಿದು ಬೆಳಗಿನವರೆಗೆ ಅಲಾಯಿ ಹಾಡಿನೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಕೆಲಸ ಅರಸಿ ವಿವಿಧೆಡೆ ಗುಳೆ ಹೋಗಿದ್ದ ಕೂಲಿ ಕಾರ್ಮಿಕರು ಗ್ರಾಮಕ್ಕೆ ಆಗಮಿಸಿದ್ದರು. ಹರಕೆ ಹೊತ್ತವರು ಭಾನುವಾರ ಸಂಜೆಯಿಂದ ತಡ ರಾತ್ರಿಯವರೆಗೆ ತಮಟೆ, ಬಾಜಾ-ಭಜಂತ್ರಿಯೊಂದಿಗೆ ಮನೆಯಿಂದ ಸೈಯದ್ ಕಾಶಿಮ್ ದರ್ಗಾದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಕೊಡೆ, ಬೆಳ್ಳಿ, ಬಂಗಾರ, ನೈವೇದ್ಯ ಅರ್ಪಿಸಿದರು.