
ಗುರುಗುಂಟಾ: ಇಲ್ಲಿನ ನಾಲ್ಕನೇ ವಾರ್ಡ್ ಮಾನಸ ನಗರದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಗ್ರಾಪಂ ಕಚೇರಿ ಮುಂದೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರು ಸೋಮವಾರ ಧರಣಿ ಆರಂಭಿಸಿದರು.
ಬಡಾವಣೆಯಲ್ಲಿ 50 ಕುಟುಂಬಗಳು ವಾಸವಿದ್ದು, ಕುಡಿವ ನೀರು, ಚರಂಡಿ, ವಿದ್ಯುತ್, ಶೌಚಗೃಹ, ರಸ್ತೆ ಸೇರಿದಂತೆ ಇತರ ಸೌಕರ್ಯಗಳು ಸಮರ್ಪಕವಾಗಿಲ್ಲದೆ ಪರದಾಡುವಂತಾಗಿದೆ. ಈ ಕುರಿತು ಗ್ರಾಪಂ, ತಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಧರಣಿ ಹಮ್ಮಿಕೊಳ್ಳಲಾಗಿದೆ. ಬಡಾವಣೆಯ ವಸತಿ ಪ್ರದೇಶಕ್ಕೆ ನಾರಾಯಣಪುರ ಬಲದಂಡೆ ನಾಲೆಯ ಬಸಿ ಮತ್ತು ಹೆಚ್ಚುವರಿ ನೀರು ಹರಿದು ಸಮಸ್ಯೆಯಾಗುತ್ತಿದೆ. ಶಾಲಾ-ಕಾಲೇಜು ಮಕ್ಕಳು, ಮಹಿಳೆಯರು, ವೃದ್ಧರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಸುತ್ತಲೂ ಗಿಡಗಂಟಿಗಳು ಬೆಳೆದು ವಿಷಜಂತುಗಳ ಹಾವಳಿ ಹೆಚ್ಚಾಗಿದೆ. ನರೇಗಾ ಯೋಜನೆಯಡಿ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕೆಲಸ ಆರಂಭಿಸಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ದಸಂಸ ಪ್ರಮುಖ ಅಮರೇಶ ನಾಯಕ ಪೂಜಾರಿ, ಕೆಆರ್‌ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ನಿರುಪಾದಿ ಕೆ.ಗೋಮರ್ಸಿ, ಜಿಲ್ಲಾ ಉಪಾಧ್ಯಕ್ಷ ಗಂಗಪ್ಪ ಕಬ್ಬೇರ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಪೋಳ್, ಶರಣಪ್ಪ ಕವಿತಾಳ, ಅಲ್ಲಾಬಕ್ಷ, ಸಾಮಾಜಿಕ ಹೋರಾಟಗಾರರಾದ ತಿಮ್ಮಣ್ಣನಾಯಕ ದೊಡ್ಡಹೊಲ, ಹನುಮಂತ ಅಂಬಿಗೇರ, ಪ್ರಮುಖರಾದ ಮಹೇಶ ಕುಮಾರ್, ಶಿವನಾಯಕ ಅಡಿಕೇರ್, ಅಮರೇಶ ಎಸ್.ಕೆ, ಮಹೇಶಗೌಡ, ಸುರೇಶ ಜೆಟ್ಟಿ, ಮೆಹಬೂಬ್ ಸಾಬ್, ಲೋಕೇಶ ಇದ್ದರು. ಎಎಸ್‌ಐ ರಮೇಶ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.