ತರೀಕೆರೆ: ಜೀವನದಲ್ಲೊಂದು ನಿಶ್ಚಿತ ಗುರಿ ಜತೆ ಅಂದುಕೊಂಡಿದ್ದನ್ನು ಸಾಧಿಸಲು ಶ್ರೇಷ್ಠ ಗುರು ಒಬ್ಬರ ಮಾರ್ಗದರ್ಶನ ಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಬುಕ್ಕಾಂಬುದಿ ಗ್ರಾಮ ಸಮೀಪದ ಬೆಟ್ಟದಲ್ಲಿ ಲಿಂಗೈಕ್ಯ ಶ್ರೀಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಲಿಂಗ ಬೆಳಗಿನ 89ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ನಂತರ ನಡೆದ ಬಾಳಬುತ್ತಿ ಧರ್ಮ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದರು.
ಭೌತಿಕ ಜೀವನ ಶ್ರೀಮಂತಗೊಂಡರಷ್ಟೇ ಸಾಲದು, ಆಂತರಿಕ ಜೀವನ ಪರಿಶುದ್ಧಗೊಳಿಸಲು ಗುರುವಿನ ಅಗತ್ಯವಿದೆ. ಹುಟ್ಟಿದ ವ್ಯಕ್ತಿಗೆ ಮರಣ ನಿಶ್ಚಿತ. ಹುಟ್ಟು ಸಾವುಗಳ ಮಧ್ಯದ ಬದುಕು ಆದರ್ಶವಾಗಿರಬೇಕು. ಸಂಸ್ಕಾರ ಸದ್ವಿಚಾರಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳಲು ಸಾಧ್ಯ. ಪೆಟ್ಟು ತಿಂದ ಕಲ್ಲು ಸುಂದರ ಮೂರ್ತಿಯಾಗುತ್ತದೆಯಾದರೆ, ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯಲಿದೆ. ನೋವುಂಡವರು ಜ್ಞಾನಿಗಳಾಗಿ ಪರಿವರ್ತಿತರಾದರೆ, ನೋವು ಕೊಡುವವರು ಜೀವನಲ್ಲಿ ಹಾಗೆಯೇ ಉಳಿಯುತ್ತಾರೆ ಎಂದರು.
ಶೀಲ,ಶೌರ್ಯ, ಚಟುವಟಿಕೆ, ಪಾಂಡಿತ್ಯ ಹಾಗೂ ಮಿತ್ರ ಸಂಗ್ರಹ ಕಳ್ಳರು ಕದಿಯಲಾರದ ಅಕ್ಷಯ ನಿಧಿಗಳು. ಇವುಗಳನ್ನು ಸಂಪಾದಿಸಲು ಮನುಷ್ಯ ಶ್ರಮಿಸಬೇಕಾಗುತ್ತದೆ. ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಪರಿವರ್ತನಾಶೀಲ ಸಮಾಜ ನಿರ್ಮಾಣಕ್ಕೆ ಮಾಡಿದ ತಪಸ್ಸು ಮತ್ತು ಕೊಟ್ಟ ಸಂದೇಶವನ್ನು ಮರೆಯಲು ಸಾಧ್ಯವಿಲ್ಲ. ಅಂಗ ಅವಗುಣಗಳನ್ನು ದೂರ ಮಾಡಿ ಲಿಂಗ ಗುಣ ಬೆಳೆಸಿದ ಯುಗಪುರುಷರು ಲಿಂ. ಶ್ರೀಸಿದ್ಧಲಿಂಗ ಜಗದ್ಗುರುಗಳು. ಅವರು ಬುಕ್ಕಾಂಬುದಿ ಬೆಟ್ಟಕ್ಕಾಗಮಿಸಿ 100 ವರುಷ ಪೂರ್ಣಗೊಂಡಿದೆ. ಮುಂದೆ ಶುಭಾಗಮನದ ಶತಮಾನೋತ್ಸವ ಸಮಾರಂಭವನ್ನು ಅವರು ತಪಗೈದ ಬುಕ್ಕಾಂಬುದಿ ತಪೋಕ್ಷೇತ್ರದಲ್ಲಿ ಆಚರಿಸುವ ಸತ್ಯ ಸಂಕಲ್ಪವನ್ನು ಟ್ರಸ್ಟ್ ಹೊಂದಿದೆ ಎಂದು ತಿಳಿಸಿದರು.
ಶಾಸಕ ಜಿ.ಎಚ್.ಶ್ರೀನಿವಾಸ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಶ್ರೀ ಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟಿನ ಉಪಾಧ್ಯಕ್ಷ ಎಸ್.ಎಂ.ವೀರಭದ್ರಪ್ಪ, ಕಾರ್ಯದರ್ಶಿ ಎಚ್.ಪಿ.ಸುರೇಶ ಮತ್ತಿತರರಿದ್ದರು.
