ಸಕಲೇಶಪುರ: ವೀರಶೈವ-ಲಿಂಗಾಯತ ಸಮುದಾಯದಲ್ಲಿ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಗುರುವಾರ ವೀರಶೈವ ಲಿಂಗಾಯತ ಯುವ ಸೇನೆ ಆಯೋಜಿಸಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ಪುಣ್ಯ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದುಕು ಪಾವನಗೊಳ್ಳಬೇಕಾದರೆ ಗುರುವಿನ ಮಾರ್ಗದರ್ಶನ ಅಗತ್ಯ. ಶ್ರೀ ಶಿವಕುಮಾರ ಸ್ವಾಮೀಜಿ ಬದುಕು ಸಮಾಜಕ್ಕೆ ಅರ್ಪಿತವಾಗಿತ್ತು. ಅವರ ಬದುಕನ್ನು ಕಂಡ ನಾವೇ ಪುಣ್ಯವಂತರು. ಆರೋಗ್ಯದಿಂದ ಬಹುಕಾಲ ಬದುಕಿದ ಚಿರಂಜೀವಿ ಸ್ವಾಮೀಜಿ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಅನಕ್ಷರತೆ ಹಾಗೂ ಬಡತನ ತಾಂಡವವಾಡುತ್ತಿದ್ದ ವೇಳೆ ಅನ್ನ ಹಾಗೂ ಅಕ್ಷರ ದಾಸೋಹ ಆರಂಭಿಸಿದ ಶ್ರೀಗಳ ಸೇವೆ ಅನನ್ಯ. ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆ ಸ್ಥಾಪಿಸಿದರು. ಉದ್ದಾನ ಸ್ವಾಮೀಜಿಗಳು ಆರಂಭಿಸಿದ ಹಾಸ್ಟೆಲ್‌ಗಳಲ್ಲಿ ಯಾವುದೇ ಜಾತಿ, ಮತವಿರಲಿಲ್ಲ. ಅವರು ಹಾಕಿಕೊಟ್ಟ ಪಂಕ್ತಿಯಲ್ಲೇ ಸಾಗಿದ ಕೀರ್ತಿ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಸಲ್ಲುತ್ತದೆ. ಸಂಸ್ಕಾರಯುತ ಶಿಕ್ಷಣ ನೀಡುವ ಗುರಿಯೊಂದಿಗೆ ಸಿದ್ಧಗಂಗಾ ಮಠ ಕೆಲಸ ಮಾಡುತ್ತಿದೆ. ದೇಶದ ಸಂಪತ್ತು ಯುವಕರು. ಯುವಕರ ಶಕ್ತಿ ಸದೃಢ ಸಮಾಜ ನಿರ್ಮಾಣಕ್ಕೆ ವಿನಿಯೋಗವಾಗಬೇಕು ಎಂದು ಸಲಹೆ ನೀಡಿದರು.
ತಾಲೂಕಿನ ವನ್ಯಜೀವಿಗಳ ಹಾಗೂ ಮಾನವ ಸಂಘರ್ಷದ ಬಗ್ಗೆ ಅರಿವಿದೆ. ಕಾಡುಪ್ರಾಣಿಗಳು ನಾಡಿಗೆ ಬರಲಾರಂಭಿಸಿವೆ. ಮಠದಲ್ಲೂ ಚಿರತೆ ಕಾಟ ಆರಂಭವಾಗಿದೆ. ಸಮಸ್ಯೆ ನೀಡುತ್ತಿರುವ ವನ್ಯಜೀವಿಗಳನ್ನು ಹಿಡಿದು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ವನ್ಯಜೀವಿಗಳಿಂದ ಮಾನವ ಪ್ರಾಣ ಹಾನಿಯಾಗದಂತೆ ನಿಗಾ ವಹಿಸಬೇಕು ಎಂದರು.
ಕೃತಜ್ಞತೆ ಮಾನವನಿಗೆ ಅಗತ್ಯವಾಗಿರಬೇಕೆ ಹೊರತು ಕೃತಘ್ನರಾಗಬಾರದು. ಸಹಾಯ ಮಾಡುವವರನ್ನು ಎಂದೂ ಮರೆಯಬಾರದು. ಉದ್ಯೋಗ ನಿಮಿತ್ತ ನಗರಗಳಿಗೆ ತೆರಳುವ ಯುವಕರು ಎಂದಿಗೂ ಹುಟ್ಟೂರು ಮರೆಯಬಾರದು. ಕಾಫಿ ಬೆಳೆಗಾರರ ಸಮಸ್ಯೆ ನನ್ನ ಅರಿವಿಗಿದ್ದು ಸಮಸ್ಯೆ ನಡುವೆ ಬದುಕುವುದನ್ನು ಕಲಿಯಬೇಕು. ಬೆಲೆ ಇದ್ದಾಗ ಬೆಳೆ ಇಲ್ಲದಿರುವುದು, ಬೆಳೆ ಇದ್ದಾಗ ಬೆಲೆ ಇಲ್ಲದಿರುವುದು ಪ್ರಕೃತಿ ನಿಯಮ ಎಂದು ತಿಳಿಸಿದರು.
ತೆಂಕಲಗೋಡು ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರ್ಕಾರ ಶಿಕ್ಷಣ ನೀಡಬೇಕು ಎಂಬ ಆಲೋಚಿಸುವ ಮುನ್ನವೇ ಮಠಮಾನ್ಯಗಳು ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದವು. ಇದರಿಂದಾಗಿ ರಾಜ್ಯದ ಸಾಕಷ್ಟು ಜನರು ವಿದ್ಯಾವಂತರಾಗಲು ಸಾಧ್ಯವಾಗಿದೆ. ಯಾವುದೇ ಜಾತಿ, ಮತದ ತಾರತಮ್ಯವಿಲ್ಲದೆ ಶಿಕ್ಷಣ ನೀಡುತ್ತಿರುವ ಮಠ ಸಿದ್ಧಗಂಗೆ. ಸಮಾಜಕ್ಕಾಗಿ ಬದುಕುವವರು ಮಹಾತ್ಮರಾಗುತ್ತಾರೆ. ಸ್ವಂತಕ್ಕಾಗಿ ಬದುಕುವವರ ನೆನಪು ನಶ್ವರವಾಗಿರಲಿದೆ. ಆದ್ದರಿಂದ, ಮರಣದ ನಂತರವೂ ಬದುಕಬೇಕು ಎಂದರೆ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಜೀವನವನ್ನು ವರ್ಣನೆ ಮಾಡುವುದು ಅಸಾಧ್ಯದ ಕೆಲಸ. ಧರ್ಮ ಎಂಬುದು ಕನ್ನಡಿ ಇದ್ದಂತೆ. ಆದ್ದರಿಂದ ನಿತ್ಯ ಧರ್ಮ ಪರಿಪಾಲನೆಯಲ್ಲಿ ತೊಡಗಿಕೊಳ್ಳುವುದು ಅಗತ್ಯ ಎಂದರು.
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲಮಠದ ಮಹಾಂತ ಸ್ವಾಮೀಜಿ, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ವೀರಶೈವ-ಲಿಂಗಾಯತ ಯುವ ಸೇನೆ ಅಧ್ಯಕ್ಷ ಜಾನೇಕೆರೆ ಸಾಗರ್ ಇತರರು ಇದ್ದರು.