ನವದೆಹಲಿ: ಗುರುಗ್ರಾಮದ ಹೂಡ ನಗರದಲ್ಲಿನ ಕೇಂದ್ರ ಮೆಟ್ರೋ ನಿಲ್ದಾಣ ಸಂಕೀರ್ಣದಲ್ಲಿರುವ ಎಸ್ಕ್ಲೇಟರ್ ಇಳಿಯುವ ವೇಳೆ ವ್ಯಕ್ತಿಯೋರ್ವ ತನ್ನ ಮೇಲೆ ಹಸ್ತಮೈಥುನ ಮಾಡುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ 29 ವರ್ಷದ ಒಳಾಂಗಣ ವಿನ್ಯಾಸಗಾರ್ತಿ ಮಂಗಳವಾರ ದೂರಿದ್ದಾರೆ.
ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಜೂನ್ 14ರಂದು ಗುರುಗ್ರಾಮದ ಮೆಟ್ರೋ ನಿಲ್ದಾಣದ ಮೊದಲನೇ ಮಹಡಿಯಲ್ಲಿರುವ ಬಟ್ಟೆಯ ಅಂಗಡಿಯಿಂದ ಹೊರ ಬರುವ ವೇಳೆ ಈ ಘಟನೆ ನಡೆದಿದೆ.
ಬಟ್ಟೆ ಅಂಗಡಿಯಿಂದ ಹೊರಬಂದು ಎಸ್ಕ್ಲೇಟರ್ನಿಂದ ಇಳಿದು ಬರುವಾಗ ನನ್ನ ಹಿಂದೆ ಏನೋ ನಡೆಯುತ್ತಿರುವುದಾಗಿ ಅನುಭವವಾಯಿತು. ಹಿಂದೆ ತಿರುಗಿ ನೋಡಿದಾಗ ಓರ್ವ ವ್ಯಕ್ತಿ ನನ್ನ ಮೇಲೆ ಹಸ್ತಮೈಥುನ ಮಾಡಿರುವುದು ಗೊತ್ತಾಯಿತು. ಆ ಕ್ಷಣ ನಾನು ಆಘಾತಕ್ಕೆ ಒಳಗಾದೆ. ಬಳಿಕ ನಾನು ಅವನನ್ನು ತರಾಟೆಗೆ ತೆಗೆದುಕೊಂಡೆ. ಆತ ತನ್ನ ಖಾಸಗಿ ಅಂಗವನ್ನು ತೋರಿಸಿ, ಅಸಭ್ಯ ಪದವನ್ನು ಬಳಸಿದ, ತಕ್ಷಣ ನಾನು ಆತನ ಕಪಾಳಕ್ಕೆ ಹೊಡೆದೆ ಎಂದು ಮಾಧ್ಯಮವೊಂದಕ್ಕೆ ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ.
ಈ ಘಟನೆ ವೇಳೆ ನಾನು ಸಹಾಯಕ್ಕಾಗಿ ಕೂಗಿಕೊಂಡೆ. ಆದರೆ, ಯಾರೊಬ್ಬರು ಮುಂದೆ ಬರಲಿಲ್ಲ. ಸುತ್ತಮುತ್ತ ಯಾವೋಬ್ಬ ಪೊಲೀಸ್ ಸಿಬ್ಬಂದಿಯು ಇರಲಿಲ್ಲ. ನಾನು ಅಲ್ಲಿಂದ ಓಡಿ ಹೋಗುವ ಮುಂಚೆ ಆತ ಮತ್ತೊಮ್ಮೆ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸಿದ. ಅಲ್ಲಿಂದ ಓಡಿ ಹೋಗಿ ಪೊಲೀಸ್ ಚೌಕಿ ಬಳಿ ಹೋದೆ. ಆದರೆ, ಅದು ಮುಚ್ಚಿತ್ತು ಎಂದು ಮಹಿಳೆ ಹೇಳಿದ್ದಾಳೆ.
ಮೊದಲಿಗೆ ಘಟನೆ ಬಗ್ಗೆ ದೂರು ನೀಡಲು ಫೇಸ್ಬುಕ್ ಮೆಸೆಂಜರ್ ಮೂಲಕ ಗುರುಗ್ರಾಮದ ಪೊಲೀಸರನ್ನು ಮಹಿಳೆ ಸಂಪರ್ಕಿಸಿದ್ದಾಳೆ. ಆದರೆ, ಯಾರೂ ಸ್ಪಂದಿಸದಿದ್ದಾಗ, ಆಕೆ ದೆಹಲಿಯ ಮೆಟ್ರೋ ರೈಲು ನಿಗಮದ ಅಧಿಕಾರಿಗಳನ್ನು ಭೇಟಿಯಾಗಿ ಘಟನೆ ಬಗ್ಗೆ ವಿವರಿಸಿದ್ದಾಳೆ. ಬಳಿಕ ಸಿಸಿಟಿವಿಯನ್ನು ತೋರಿಸಿ ಆರೋಪಿಯನ್ನು ಗುರುತಿಸುವಂತೆ ಅಧಿಕಾರಿಗಳು ಆಕೆಯನ್ನು ಕರೆದಿದ್ದಾರೆ ಎಂದು ಹೇಳಲಾಗಿದೆ.
ನಾನು ಸಿಸಿಟಿವಿ ಫುಟೇಜ್ನಲ್ಲಿ ಆರೋಪಿಯನ್ನು ಗುರುತಿಸಿದ್ದೇನೆ. ಆದರೆ, ನನ್ನ ರಕ್ಷಣೆ ಹಾಗೂ ದೂರಿನ ನಂತರ ಆಗುವ ಪರಿಣಾಮದ ಭಯದಿಂದ ನಾನು ಎಫ್ಐಆರ್ ದಾಖಲಿಸಬೇಕೋ, ಬೇಡವೋ ಎಂದು ನಿರ್ಧರಿಸಬೇಕಿದೆ ಎಂದು ಮಹಿಳೆ ತಿಳಿಸಿದ್ದಾಳೆ. (ಏಜೆನ್ಸೀಸ್)