ಗುರುದ್ವಾರಕ್ಕೆ ಈಗ ಸುವರ್ಣ ಸ್ಪರ್ಶ

ಬೀದರ್: ಬಹುಕೋಟಿ ವೆಚ್ಚದಲ್ಲಿ ನವೀಕರಣ ಆಗಿರುವ ಇಲ್ಲಿನ ಇತಿಹಾಸ ಪ್ರಸಿದ್ಧ ಗುರುದ್ವಾರದ ಗರ್ಭಗುಡಿ (ಶ್ರೀ ದರ್ಬಾರಾ ಸಾಹೇಬ್) ಮತ್ತು 10 ಕೆಜಿ ಶುದ್ಧ ಚಿನ್ನದಲ್ಲಿ ನಿರ್ವಿುಸಿದ ಮಂಟಪ (ಪಾಲಕಿ) ಉದ್ಘಾಟನಾ ಸಮಾರಂಭ ಬುಧವಾರ ಶ್ರದ್ಧೆ- ಭಕ್ತಿ ಪೂರ್ವಕವಾಗಿ ಸಡಗರ ದಿಂದ ನಡೆಯಿತು.

ಬೆಳಗಿನ ಜಾವ ದಿಂದ ಸಂಜೆವರೆಗೆ ಗುರುದ್ವಾರ ಪರಿಸರದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಮಹಾರಾಷ್ಟ್ರ, ಪಂಜಾಬ್, ಬಿಹಾರ, ಹೊಸದಿಲ್ಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿ ದೇಶದ ನಾನಾ ಕಡೆಗಳಿಂದ ಆಗಮಿಸಿದ್ದ ಸಹಸ್ರಾರು ಸಿಖ್ಖರು ಇಲ್ಲಿ ಸಮಾಗಮಗೊಂಡು, ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.

ಎರಡು ದಿನಗಳಿಂದ ನಡೆಯುತ್ತಿದ್ದ ಅಖಂಡ ಪಾಠದ ಸಮಾರೋಪ, ವಿವಿಧ ಧಾರ್ವಿುಕ ಕಾರ್ಯಕ್ರಮಗಳ ಜತೆಗೆ ಬೋಲೆ ಸೋನಿಹಾಲ್-ಸತ್​ಶ್ರೀ ಅಕಾಲ್, ವಾಹೆ ಗುರುಜಿ ಕಿ ಖಾಲ್ಸಾ- ವಾಹೇ ಗುರುಜಿ ಕಿ ಫತೇಹ ಎಂಬಿತ್ಯಾದಿ ಉದ್ಘೋಷಗಳ ಮಧ್ಯೆ ಅತ್ಯಾಕರ್ಷಕವಾಗಿ 10 ಕೆಜಿ ಚಿನ್ನದಲ್ಲಿ ನಿರ್ವಿುಸಿದ ಮಂಟಪದ ಉದ್ಘಾಟನೆಯೂ ನಡೆಯಿತು. ಅಪಾರ ಭಕ್ತರು ಈ ಸಂಭ್ರಮದ ಸಮಾರಂಭವನ್ನು ಕಣ್ತುಂಬಿ ಕೊಂಡರು. ದೇಶದ ಗುರುದ್ವಾರದಲ್ಲೇ ಇಷ್ಟೊಂದು ಚಿನ್ನದ ಮಂಟಪ ಬೀದರ್​ನಲ್ಲಿ ಮಾಡಿರುವುದು ವಿಶೇಷ.