ಚೆಲುವನಾರಾಯಣಸ್ವಾಮಿ ಬೃಂದಾವನೋತ್ಸವ

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ಹಾಗೂ ತುಳಸಿಯವರ ಬೃಂದಾವನೋತ್ಸವ ವಿಜೃಂಭಣೆಯಿಂದ ನೆರವೇರಿತು.

ಪ್ರತಿ ವರ್ಷವೂ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ರಥೋತ್ಸವದಂದು ನಡೆಯುವ ಬೃಂದಾವನೋತ್ಸವ ಸುತ್ತಲ ಗ್ರಾಮಗಳಲ್ಲಿ ಪ್ರಸಿದ್ಧಿ ಪಡೆದಿದೆ. ಗ್ರಾಮದ ಚೆಲುವನಾರಾಯಣ, ಈಶ್ವರ ದೇವಸ್ಥಾನಗಳಿಗೆ ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಸೋಮವಾರ ರಾತ್ರಿ ಉತ್ಸವಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರತಿಯೊಂದು ಮನೆಯವರು ತಮ್ಮ ಬಂಧು ಬಾಂಧವರನ್ನು ಆಹ್ವಾನಿಸಿ ಹಬ್ಬ ಆಚರಿಸಿ ಸಂಭ್ರಮಿಸಿದರು. ಅಹೋರಾತ್ರಿ ಸಾಗಿದ ಮೆರವಣಿಗೆ ನಂತರ ಬೆಳಗಿನ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಮಾದಲವಾಡಿಯ ವಿದ್ವಾನ್ ಶ್ರೀನಿವಾಸ ನೇತೃತ್ವದಲ್ಲಿ ತುಳಸಿ ಕಲ್ಯಾಣೋತ್ಸವ ನಡೆಸಲಾಯಿತು.

ಬೆಳಗ್ಗೆ 10 ಗಂಟೆಗೆ ಶ್ರೀ ತುಳಸಿ ಚೆಲುವರಾಯಸ್ವಾಮಿ ಅವರ ಉತ್ಸವ ಮೂರ್ತಿಗಳನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಪ್ರತಿಯೊಂದು ಮನೆಯವರೂ ಉತ್ಸವಕ್ಕೆ ಪೂಜೆ ಸಲ್ಲಿಸಿ ತಮ್ಮ ಭಕ್ತಿಭಾವ ಮೆರೆದರು. ಈ ಸಂದರ್ಭದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಯುವಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.