ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಒಳ ರೋಗಿಗಳು ಮತ್ತು ಹೊರ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.
ಕಳೆದ ಆರು ತಿಂಗಳಿನಿಂದ ಆಸ್ಪತ್ರೆ ಸಿಬ್ಬಂದಿಗೆ ವೇತನ ಪಾವತಿ ಮಾಡಿಲ್ಲ. ಹೀಗಾಗಿ, ಇದರಿಂದ ಸಿಬ್ಬಂದಿಯ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕುಟುಂಬ ನಿರ್ವಹಣೆಗೆ ಸಿಬ್ಬಂದಿ ಬೇರೆ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ತಾಲೂಕು ಕೇಂದ್ರದಲ್ಲಿರುವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಪ್ರತಿ ದಿನವೂ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಅಪಘಾತಗಳು ಸಂಭವಿಸಿದ ಕೂಡಲೇ ಗಾಯಾಳುಗಳನ್ನು ಈ ಆಸ್ಪತ್ರೆಗೆ ಕರೆತರಲಾಗುತ್ತಿದೆ. ಅಲ್ಲದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಅಲ್ಲಲ್ಲಿ ವನ್ಯಜೀವಿ ದಾಳಿಗಳಿಂದ ಗಾಯಗೊಂಡವರನ್ನು ಚಿಕಿತ್ಸೆಗೆ ಇಲ್ಲಿಗೆ ಕರೆತರಲಾಗುತ್ತಿದೆ. ಇದರಿಂದ 100-150 ಸಂಖ್ಯೆಯಲ್ಲಿದ್ದ ಹೊರರೋಗಿಗಳ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚು ಏರಿಕೆಯಾಗಿದೆ.
ಇಷ್ಟು ದೊಡ್ಡ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಗೂ ಸೇವೆ ನೀಡಲು ಸಿಬ್ಬಂದಿ ಹಾಗೂ ವೈದ್ಯರ ಕೊರತೆಯಾಗಿದೆ.
ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಮಂಜೂರಾಗಿರುವ ಸಂಖ್ಯೆಯಲ್ಲಿ ನರ್ಸಿಂಗ್ ಸಿಬ್ಬಂದಿ ಇಲ್ಲ. ಹಾಗಾಗಿ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕ ಆಸ್ಪತ್ರೆಗೆ 14 ವೈದ್ಯರ ಹುದ್ದೆ ಹಾಗೂ 15 ನರ್ಸ್ ಹುದ್ದೆಗಳು ಮಂಜೂರಾಗಿವೆ. ಆದರೆ, 10 ಮಂದಿ ನರ್ಸ್ ಹಾಗೂ ನಾಲ್ವರು ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ವೈದ್ಯರು ಹಾಗೂ ನರ್ಸ್‌ಗಳಿಗೆ ಸಾಧ್ಯವಾಗುತ್ತಿಲ್ಲ. ತುರ್ತು ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗೆ ಕರೆತರುವ ರೋಗಿಗಳನ್ನು ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆ ಇಲ್ಲವೇ ಮೈಸೂರಿಗೆ ಹೋಗುವಂತೆ ಹೇಳಿ ಕಳುಹಿಸುತತಾರೆ.
ಆಂಬುಲೆನ್ಸ್‌ಗಳ ಕೊರತೆ:
ಸದಾ ರೋಗಿಗಳಿಂದ ಗಿಜಿಗುಡುವ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ಗಳ ಕೊರತೆ ಇದೆ. ಇದರಿಂದ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕದಂತಾಗಿದೆ. ಆಸ್ಪತ್ರೆಯಲ್ಲಿದ್ದ ಎರಡು ಆಂಬುಲೆನ್ಸ್‌ಗಳಲ್ಲಿ ಕಳೆದ ವರ್ಷದಿಂದ ಒಂದು ಆಂಬುಲೆನ್ಸ್ ಕೆಟ್ಟು ನಿಂತಿದೆ. ಆದರೂ, ಆ ವಾಹನ ಇದುವರೆಗೂ ರಿಪೇರಿ ಮಾಡಿಸುವ ಗೋಜಿಗೆ ಆಡಳಿತ ಮಂಡಳಿ ಮುಂದಾಗಿಲ್ಲ. ಇದರಿಂದ ಅಪಘಾತ, ಹೆರಿಗೆ, ಎದೆನೋವು ಮುಂತಾದ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆತರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಇಂಥ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಇಲ್ಲವೇ ಮೈಸೂರಿನ ಆಸ್ಪತ್ರೆಗಳಿಗೆ ಕಳಿಸಬೇಕಾಗುತ್ತದೆ. ಇದಕ್ಕೂ ಆಂಬುಲೆನ್ಸ್‌ಗಳ ಕೊರತೆಯಾಗುತ್ತಿದೆ. ಸಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರಕದೆ ಅಮೂಲ್ಯ ಜೀವಗಳು ತೊಂದರೆಗೆ ಸಿಲುಕುವಂತಾಗಿದೆ.
ಆರು ತಿಂಗಳಿನಿಂದ ಸಿಬ್ಬಂದಿಗೆ ವೇತನವಿಲ್ಲ:
ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 33 ಸಿಬ್ಬಂದಿಗೆ ಫೆಬ್ರವರಿ ನಂತರ ಮಾಸಿಕ ವೇತನ ಪಾವತಿಯಾಗಿಲ್ಲ. ಇದರಿಂದ ದಿನದ ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ತಮ್ಮ ಕುಟುಂಬ ನಿರ್ಹವಣೆ ಮಾಡುವುದು ಸವಾಲಾಗಿ ಪರಿಣಮಿಸಿದೆ. ತಮ್ಮ ಮನೆಗಳಿಗೆ ರೇಷನ್ ಖರೀದಿ ಹಬ್ಬ ಆಚರಣೆ, ಮಕ್ಕಳ ಶಿಕ್ಷಣಕ್ಕೆ ಸಾಲ ಮಾಡಿ ಹೈರಾಣಾಗಿದ್ದಾರೆ. ಹಳೆಯ ಸಾಲ ತೀರಿಸದ ಪರಿಣಾಮ ಹೊಸದಾಗಿ ಸಾಲ ಕೊಡುವವರಿಲ್ಲದೆ ಜೀವನ ನಿರ್ವಹಣೆಗೆ ಪರಿತಪಿಸುವಂತಾಗಿದೆ.
ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮೇ, ಜೂನ್ ಎರಡು ತಿಂಗಳ ವೇತನದ ಬಿಲ್ ಮಾಡಿದ್ದರೂ ಬಿಲ್ ಪಾಸ್ ಆಗಿಲ್ಲ. 4 ವೈದ್ಯರು ಹಾಗೂ 5 ನರ್ಸ್ ಹುದ್ದೆಗಳು ಖಾಲಿಯಾಗಿದ್ದರೂ ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಲಭ್ಯ ಸಿಬ್ಬಂದಿಯನ್ನು ಸರಿದೂಗಿಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೇವೆ ಒದಗಿಸಲಾಗುತ್ತಿದೆ.
ಡಾ.ಮಂಜುನಾಥ್, ಆಡಳಿತ ವೈದ್ಯಾಧಿಕಾರಿ, ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ.