ವಿಜೃಂಭಣೆಯ ಪಾರ್ವತಾಂಭಾ ಜಾತ್ರಾ ಮಹೋತ್ಸವ

ಗುಂಡ್ಲುಪೇಟೆ: ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಅಲ್ಲಳ್ಳಿ ಶ್ರೀ ಪಾರ್ವತಾಂಭಾ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದಲ್ಲಿ ತೇರು ಸಂಚರಿಸುವ ಬೀದಿ ತಳಿರು ತೋರಣ ಹಾಗೂ ಸುಣ್ಣಬಣ್ಣಗಳಿಂದ ಕಂಗೊಳಿಸಿತು. ಶ್ರೀ ಪಾರ್ವತಾಂಬೆಯ ಉತ್ಸವ ಮೂರ್ತಿಯನ್ನು ಹೊತ್ತ ತೇರನ್ನು ವಿವಿಧ ಹೂಗಳಿಂದ ಸಿಂಗಾರಗೊಳಿಸಿ, ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಮಂಚಳ್ಳಿ ಕಡೆಗೆ ತೆರಳುವ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಸುಮಾರು 200 ವರ್ಷಗಳಿಂದಲೂ ಮೂರನೆ ಕಾರ್ತಿಕ ಸೋಮವಾರದಂದು ಈ ಜಾತ್ರಾ ಮಹೋತ್ಸವ ನಡೆದುಕೊಂಡು ಬರುತ್ತಿದ್ದು, ಈ ದೇವಿಯ ಹೂವು ಮತ್ತು ಪ್ರಸಾದವನ್ನು ಜಾನುವಾರುಗಳಿಗೆ ಹಾಕಿದರೆ ಯಾವುದೇ ರೋಗಕ್ಕೆ ತುತ್ತಾಗುವುದಿಲ್ಲ ಎಂಬ ನಂಬಿಕೆ ಕಾರಣ ರೈತರು ತಮ್ಮ ರಾಸುಗಳನ್ನು ಕರೆತಂದು ತೀರ್ಥ ಪಡೆಯುವುದು ವಾಡಿಕೆ.

ಬಂಡೀಪುರ ಹುಲಿ ಯೋಜನೆಯ ಅರಣ್ಯದೊಳಗೆ ಪಾರ್ವತಾಂಬೆಯ ಮೂಲ ದೇವಸ್ಥಾನವಿದ್ದು ಈ ಜಾತ್ರಾ ಮಹೋತ್ಸವದ ಮುನ್ನ ಕಾಡಿಗೆ ತೆರಳುವ ಹಸಗೂಲಿ ಗ್ರಾಮಸ್ಥರು ದೇವರ ವಿಗ್ರಹವಿರುವ ಪೆಟ್ಟಿಗೆಗೆ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ಹೊತ್ತು ತಂದರು. ನಂತರ ಜಾತ್ರೆ ದಿನದಂದು ತೇರನ್ನು ಸಿಂಗರಿಸಿ ಗ್ರಾಮದ ವಿವಿಧ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.

ಪಾರ್ವತಾಂಬೆಯ ದರ್ಶನ ಪಡೆಯಲು ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ಅನೇಕ ಜಿಲ್ಲೆ ಲಕ್ಷಾಂತರ ಭಕ್ತರು ಪಾಲ್ಗೊಂಡು ದೇವಿ ತೇರಿಗೆ ಹಣ್ಣು ದವನ ಎಸೆದು ಕೃತಾರ್ಥರಾದರು. ಹರಕೆಹೊತ್ತವರು ಹರಕೆ ತೀರಿಸಿದರು. ಗುಂಡ್ಲುಪೇಟೆ, ನಂಜನಗೂಡು ತಾಲೂಕಿನ ಹಲವು ಗ್ರಾಮದ ರೈತರು ಎತ್ತುಗಳನ್ನು ಸಿಂಗರಿಸಿ ಪಂಜಿನಸೇವೆ ಸಲ್ಲಿಸಿದರು.

ಜಾತ್ರೆಯಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್, ಜಿಪಂ ಸದಸ್ಯರಾದ ಪಿ.ಚೆನ್ನಪ್ಪ, ರತ್ನಮ್ಮ ಶ್ರೀಕಂಠಪ್ಪ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಜಾತ್ರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.