ಗಿರಿಜನ ಕಾಲನಿಯಲ್ಲಿ ಬಿರ್ಸಾಮುಂಡಾ ಜಯಂತಿ

ಗುಂಡ್ಲುಪೇಟೆ: ತಾಲೂಕಿನ ಮದ್ದೂರು ಗಿರಿಜನ ಕಾಲನಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಬಿರ್ಸಾ ಮುಂಡಾ ಜಯಂತಿ ಆಚರಿಸಲಾಯಿತು.

ಗ್ರಾಮದ ವಸತಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಬೇರಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ರಾಜೇಶ್ ಉದ್ಘಾಟಿಸಿ ಮಾತನಾಡಿ, ಹಿಂದಿನಿಂದಲೂ ಅರಣ್ಯದಲ್ಲಿ ನೆಲೆಸಿದ್ದ ಗಿರಿಜನರನ್ನು ಮುಖ್ಯವಾಹಿನಿಗೆ ತರಲು ಸರ್ಕಾರವು ಹಲವಾರು ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಇವುಗಳ ಬಗ್ಗೆ ಕಾಲಕಾಲಕ್ಕೆ ತಿಳುವಳಿಕೆ ನೀಡಲಾಗುತ್ತಿದ್ದರೂ ವಿದ್ಯಾಭ್ಯಾಸದ ಕೊರತೆಯಿಂದ ಗಿರಿಜನರು ಇವುಗಳ ಸದ್ಬಳಕೆ ಮಾಡಿಕೊಳ್ಳದೆ ಹಿಂದುಳಿದಿದ್ದಾರೆ ಎಂದು ವಿಷಾದಿಸಿದರು.

ಗಿರಿಜನರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದೇ 19ರಂದು ಪಟ್ಟಣದಲ್ಲಿ ಎಲ್ಲಾ ಹಾಡಿಗಳಲ್ಲಿ ನೆಲೆಸಿರುವ ಗಿರಿಜನರ ಸಮ್ಮುಖದಲ್ಲಿ ಜಯಂತಿ ಆಚರಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮದ್ದೂರು ವಲಯದ ಆರ್‌ಎಫ್‌ಒ ಶೈಲೇಂದ್ರಕುಮಾರ್, ಪೊಲೀಸ್ ಸಿಬ್ಬಂದಿ ನಾಗರಾಜು, ಗಿರಿಜನ ಮುಖಂಡರಾದ ರಾಜೇಂದ್ರ, ನಾಗರಾಜು, ಜಗದೀಶ್, ರತ್ನಮ್ಮ ಸೇರಿದಂತೆ ಹಲವರು ಇದ್ದರು.