ಕುಡಿಯುವ ನೀರಿಗೆ ತತ್ವಾರ

ದುಪ್ಪಟ್ಟು ಬೆಲೆ ನೀಡಿ ನೀರು ಕೊಳ್ಳುವ ಸ್ಥಿತಿ ನಿರ್ಮಾಣ

ಗುಂಡ್ಲುಪೇಟೆ: ಪೂರ್ವ ಮುಂಗಾರು ಮಳೆ ಕೈಕೊಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಶುದ್ಧ ಕುಡಿಯುವ ನೀರಿಗೆ ದುಪ್ಪಟ್ಟು ಬೆಲೆ ತೆರಬೇಕಾಗಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ಹಾಗೂ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಇಳಿಕೆಯಿಂದ ಕುಡಿಯುವ ನೀರಿನ ಕೊರತೆಯ ಸಮಸ್ಯೆ ಎದುರಾಗಿದ್ದರೆ, ಪಟ್ಟಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಪಡೆದುಕೊಳ್ಳಲು ಸಾಧ್ಯವಾಗದೆ ಸಾರ್ವಜನಿಕರು ದುಬಾರಿ ಬೆಲೆ ತೆತ್ತು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ 134 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ಯೋಜನೆಯಡಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ 28 ಗ್ರಾಮಗಳಿಗೆ ಮಾತ್ರ ಈ ಯೋಜನೆಯ ಲಾಭ ದೊರಕದೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ ಗ್ರಾಮಾಂತರ ಪ್ರದೇಶಗಳಿಗೆ ನೀರು ಪೂರೈಸಲು ಪ್ರಾರಂಭಿಸಿರುವ ನೀರಿನ ಘಟಕಗಳಿಗೆ ಅಗತ್ಯ ಪ್ರಮಾಣದ ನೀರು ಸರಬರಾಜಾಗದೆ ಕೊರತೆಯಾಗುತ್ತಿದೆ. ಅಲ್ಲದೆ ವಿದ್ಯುತ್ ಕಡಿತ, ತಾಂತ್ರಿಕ ದೋಷಗಳಿಂದ ಎಲ್ಲೆಡೆ ತೀವ್ರ ತೊಂದರೆ ಎದುರಿಸಬೇಕಾಗಿದೆ.
ಕೆಲವೆಡೆ 2 ರೂಪಾಯಿಗೆ 20 ಲೀ. ನೀರು ದೊರಕಿದರೆ, ಇನ್ನು ಕೆಲವು ಕಡೆಗಳಲ್ಲಿ 5 ರೂ. ನೀಡಬೇಕಾಗಿದೆ. ಹಣಕೊಟ್ಟರೂ ಸಕಾಲದಲ್ಲಿ ಅಗತ್ಯ ಪ್ರಮಾಣದ ನೀರು ದೊರಕದೆ ಮಿನರಲ್ ನೀರಿಗೆ ಒಂದು ಕ್ಯಾನ್‌ಗೆ 50 ರೂ.ಕೊಟ್ಟು ಖರೀದಿಸಬೇಕಾಗಿದ್ದು, ಬೇಸಿಗೆಯ ಹಿನ್ನೆಲೆಯಲ್ಲಿ ನೀರಿಗೆ ಬೇಡಿಕೆ ಹೆಚ್ಚಿದ ಪರಿಣಾಮ ಖಾಸಗಿ ವ್ಯಕ್ತಿಗಳು ಮಿನರಲ್ ನೀರಿಗೆ 30 ರಿಂದ 50 ರೂ. ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ.