ತಹಸೀಲ್ದಾರ್‌ಗೆ ಎಸಿಬಿ ಡಿವೈಎಸ್‌ಪಿ ನಿಂದನೆ

ಗುಂಡ್ಲುಪೇಟೆ: ತಾಲೂಕಿನ ಬೆಳಚಲವಾಡಿ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಅನುಮತಿಯಿಲ್ಲದೆ ಕಡಿದ ಬಗ್ಗೆ ಪರಿಶೀಲನೆ ನಡೆಸಿದ ಗ್ರೇಡ್-2 ತಹಸೀಲ್ದಾರ್‌ಗೆ ಎಸಿಬಿ ಡಿವೈಎಸ್‌ಪಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತ ಆಡಿಯೋ ಇದೀಗ ವೈರಲ್ ಆಗಿದೆ.

ಗ್ರಾಮದ ಪುಟ್ಟಸ್ವಾಮಾರಾಧ್ಯ ಎಂಬುವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ 26 ಸಾಗುವಾನಿ ಮರಗಳನ್ನು ಅರಣ್ಯ ಹಾಗೂ ಕಂದಾಯ ಇಲಾಖೆಯ ಅನುಮತಿ ಪಡೆಯದೆ ಕಡಿದಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಗ್ರೇಡ್-2 ತಹಸೀಲ್ದಾರ್ ಸುದರ್ಶನ್ ಗ್ರಾಮ ಲೆಕ್ಕಾಧಿಕಾರಿಗೆ ಸೂಚನೆ ನೀಡಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಗ್ರಾಮ ಲೆಕ್ಕಾಧಿಕಾರಿ ಅನುಮತಿ ಪಡೆಯದಿದ್ದ ಬಗ್ಗೆ ವರದಿ ಸಲ್ಲಿಸಿದ್ದರು.

ಈ ಬಗ್ಗೆ ಜಮೀನಿನ ಮಾಲೀಕ ಪುಟ್ಟಸ್ವಾಮಾರಾಧ್ಯ ಚಿಕ್ಕಬಳ್ಳಾಪುರದಲ್ಲಿ ಎಸಿಬಿ ಡಿವೈಎಸ್‌ಪಿಯಾಗಿರುವ ತಮ್ಮ ಮಗ ಪ್ರಸಾದ್ ಅವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಪ್ರಸಾದ್ ಸುದರ್ಶನ್ ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಸುದರ್ಶನ್ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆದರಿಕೆ ಕರೆಯನ್ನು ರೆಕಾರ್ಡ್ ಮಾಡಿದ್ದು, ಆ ಆಡಿಯೋ ವೈರಲ್ ಆಗಿದೆ. ಘಟನೆ ನಡೆದಿರುವುದು ನಿಜ. ಆದರೆ ಈ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸುದರ್ಶನ್ ಹೇಳಿದ್ದಾರೆ. ಅಕ್ರಮವಾಗಿ ಕಡಿದ ಮರಗಳನ್ನು ಗುಂಡ್ಲುಪೇಟೆ ಬಫರ್ ವಲಯಾರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.