More

    ಕೃಷಿಕರಿಗೆ ಬಂದೂಕು ನಿರ್ವಹಿಸುವುದೇ ದೊಡ್ಡ ಸವಾಲು

    ಹರೀಶ್ ಮೋಟುಕಾನ ಮಂಗಳೂರು

    ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆ ಹಾಗೂ ಪ್ರಾಣ ರಕ್ಷಣೆಗೆ ಕಾನೂನಿನ ಚೌಕಟ್ಟಿನಲ್ಲಿ ಕಲ್ಪಿಸಲಾದ ಬಂದೂಕು ನಿರ್ವಹಣೆ ಮೂರ್ನಾಲ್ಕು ವರ್ಷಗಳಿಂದ ಕಗ್ಗಂಟಾಗಿದೆ. ಸರ್ಕಾರ ಕಾನೂನಿನಲ್ಲಿ ಮಾಡಿರುವ ಕೆಲವೊಂದು ಬದಲಾವಣೆ ಇದಕ್ಕೆ ಕಾರಣ.
    ಬಂದೂಕು ಹೊಸ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಇರುವ ಬಂದೂಕು ಪರವಾನಗಿಯನ್ನು ಪ್ರತೀ ಮೂರು ವರ್ಷಗಳಿಗೊಮ್ಮೆ ನವೀಕರಿಸಬೇಕು. ನಾಲ್ಕೈದು ವರ್ಷಗಳ ಹಿಂದೆ ಇದರ ಶುಲ್ಕ ಕೇವಲ 90 ರೂ. ಆಗಿತ್ತು. ಪ್ರಸ್ತುತ 1,500 ರೂ.ಗೆ ಹೆಚ್ಚಿಸಲಾಗಿದೆ. ಹಿಂದೆ ತಹಸೀಲ್ದಾರ್ ಮಟ್ಟದಲ್ಲಿ ಪರವಾನಗಿ ನವೀಕರಿಸುವ ಅವಕಾಶವಿತ್ತು. ಈಗ ಜಿಲ್ಲಾಧಿಕಾರಿ ಮಟ್ಟದಲ್ಲಿ ಆಗಬೇಕು. ಗ್ರಾಮೀಣ ಭಾಗದಿಂದ ಇದಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಅಲೆದಾಡಬೇಕು ಎನ್ನುವುದು ಕೃಷಿಕರ ಅಳಲು.

    ಹೊಸ ನಿಯಮಾವಳಿ ಸಮಸ್ಯೆ: ಬ್ರಿಟಿಷರ ಕಾಲದಲ್ಲಿ ಬಳಕೆಯಲ್ಲಿದ್ದ ಬಂದೂಕು ಈಗಲೂ ಕೆಲವು ಮನೆಗಳಲ್ಲಿ ಸುಸ್ಥಿತಿಯಲ್ಲಿವೆ. ತಂದೆಯ ಹೆಸರಿನ ಬಂದೂಕು ಪರವಾನಗಿಯನ್ನು ಮಗನ ಹೆಸರಿಗೆ ವರ್ಗಾಯಿಸಲು ಅರಣ್ಯ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಂದ ಎನ್‌ಒಸಿ ತರಬೇಕು. ಬಂದೂಕು ತರಬೇತಿ ಪಡೆದು ಪ್ರಮಾಣಪತ್ರ ಸಲ್ಲಿಸಬೇಕು.

    ಬಂದೂಕುಗಳಿಗೆ ಹಾನಿ: ಚುನಾವಣೆ ಸಂದರ್ಭ ಬಂದೂಕುಗಳನ್ನು ಪೊಲೀಸ್ ಠಾಣೆಗಳಲ್ಲಿ ಡೆಪಾಸಿಟ್ ಇಡುವಾಗ ಮೂರ್ನಾಲ್ಕು ತಿಂಗಳು ಬಂದೂಕುಗಳನ್ನು ರಾಶಿ ಹಾಕಿಡಲಾಗುತ್ತದೆ. ಸಾಮಾನ್ಯವಾಗಿ ಬಂದೂಕುಗಳಿಗೆ ವಾರಕ್ಕೊಂದು ಬಾರಿ ಗನ್ ಆಯಿಲ್ ಹಾಕಿ ನಿರ್ವಹಣೆ ಅಗತ್ಯ. ಠಾಣೆಯಲ್ಲಿ ರಾಶಿ ಹಾಕುವುದರಿಂದ ಹಾನಿಯಾಗುತ್ತದೆ, ನಿರ್ವಹಣೆಯೂ ಇರುವುದಿಲ್ಲ. ಮೇಲಾಗಿ ಈ ಅವಧಿಯಲ್ಲಿ ಬಂದೂಕು ಇಲ್ಲದಿರುವುದು ಕೂಡ ಕೃಷಿಕರಿಗೆ ಸಮಸ್ಯೆಯಾಗುತ್ತಿದೆ.

    ಬಂದೂಕು ಅತ್ಯಗತ್ಯ: ಬಂದೂಕು ದುರ್ಬಳಕೆ ವಿರಳ. ಕಾಡುಪ್ರಾಣಿಗಳನ್ನು ಹೆದರಿಸಲು ಮಾತ್ರ ಉಪಯೋಗಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಂಗಗಳು ಎಳನೀರು ಕುಡಿಯುವುದರಿಂದ ಕೃಷಿಕರಿಗೆ ತೆಂಗಿನಕಾಯಿ ಸಿಗುತ್ತಿಲ್ಲ. ಬಂದೂಕು ಕಂಡರೆ ಮಾತ್ರ ಮಂಗಗಳು ಓಡುತ್ತವೆ. ಕಾಡಾನೆ, ಕಾಡುಹಂದಿ, ಕಾಡುಕೋಣ, ಮಂಗಗಳ ಹಾವಳಿ ವಿಪರೀತವಾಗಿರುವ ಗ್ರಾಮೀಣ ಭಾಗದಲ್ಲಿ ಅವುಗಳನ್ನು ಬೆದರಿಸಲು ಬಂದೂಕು ಅಗತ್ಯವಿದೆ ಎನ್ನುತ್ತಾರೆ ಕೃಷಿಕ ಸೋಮಶೇಖರ ನೇರಳ ತಿಳಿಸಿದ್ದಾರೆ.

    ಎಷ್ಟು ಬಂದೂಕುಗಳಿವೆ?
    ಪುತ್ತೂರು ಉಪವಿಭಾಗದಲ್ಲಿ 6347, ಬಂಟ್ವಾಳ ಉಪವಿಭಾಗದಲ್ಲಿ 3273, ಮಂಗಳೂರು ನಗರ ಕಮಿಷನರೆಟ್ ವ್ಯಾಪ್ತಿಯಲ್ಲಿ 2005 ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11,625 ಪರವಾನಗಿ ಪಡೆದ ಬಂದೂಕುಗಳಿವೆ.

    ಬಂದೂಕು ಪರವಾನಗಿ ಹೆಸರನ್ನು ವರ್ಗಾವಣೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ತಂದೆಗೆ ಎರಡು, ಮೂರು ಮಂದಿ ಮಕ್ಕಳಿದ್ದರೆ ಅವರೇ ಯಾರ ಹೆಸರಿಗೆ ಕೊಡಬೇಕು ಎಂಬುದರ ಬಗ್ಗೆ ದಾಖಲೆ ಒದಗಿಸಬೇಕು. ದಾಖಲಾತಿಗಳು ಸಮರ್ಪಕವಿದ್ದರೆ ಶೀಘ್ರ ವರ್ಗಾವಣೆ ಮಾಡಿ ಕೊಡಲಾಗುವುದು.
    – ಸಿಂಧೂ ಬಿ.ರೂಪೇಶ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

    ಕೃಷಿಕರಿಗೆ ಬಂದೂಕು ಪರವಾನಗಿಗೆ ಸಂಬಂಧಿಸಿ ಜಾರಿಯಲ್ಲಿರುವ ನಿಯಮಾವಳಿಗಳ ಬದಲಾವಣೆ ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ, ನಿಯಮಾವಳಿ ಸಡಿಲಿಕೆ ಮಾಡಲು ಪ್ರಯತ್ನಿಸಲಾಗುವುದು.
    – ಎಸ್.ಅಂಗಾರ, ಶಾಸಕ, ಸುಳ್ಯ

    ಪ್ರಸ್ತುತ ಬಂದೂಕು ಮೌಲ್ಯಕ್ಕಿಂತ ಅದರ ಪರವಾನಗಿ, ನಿರ್ವಹಣೆಗೆ ಹೆಚ್ಚಿನ ಮೊತ್ತ ವ್ಯಯಿಸಬೇಕಿದೆ. ಸರ್ಕಾರ ಪರವಾನಗಿ ಶುಲ್ಕ ಕಡಿಮೆ ಮಾಡಬೇಕು. ಪರವಾನಗಿ ನವೀಕರಣ ಹಾಗೂ ಹೆಸರು ವರ್ಗಾವಣೆ ನಿಯಮಾವಳಿ ಸರಳಗೊಳಿಸಿದರೆ ಕೃಷಿಕರಿಗೆ ಅನುಕೂಲವಾಗಲಿದೆ.
    – ಎಂ.ಡಿ.ವಿಜಯ ಕುಮಾರ್, ಕೃಷಿಕ, ಸುಳ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts