More

    ಗಲ್ಲಿ ಸ್ವಚ್ಛವಾಗಿಟ್ಟರೆ ವಿದೇಶ ಪ್ರವಾಸ !

    ಬೆಳಗಾವಿ: ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಸುಂದರ ಪರಿಸರ ನಿರ್ಮಿಸುವ ಸಮಿತಿಯೊಂದರ ಎಲ್ಲ ಸದಸ್ಯರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುವ ಬಗ್ಗೆ ಬೆಳಗಾವಿಯ ಶಾಸಕದ್ವಯರು ವಿಶೇಷ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ.
    ಸ್ಮಾರ್ಟ್‌ಸಿಟಿಯನ್ನು ಸ್ವಚ್ಛ ಮತ್ತು ಸುಂದರಗೊಳಿಸುವ ನಿಟ್ಟಿನಲ್ಲಿ ಈ ಯೋಜನೆ ಅನುಕೂಲವಾಗಲಿದೆ ಎಂಬ ಚಿಂತನೆಯಿಂದ ಅನುಷ್ಠಾನಕ್ಕೆ ಮುಂದಾಗಿದ್ದು, ಅದಕ್ಕಾಗಿ ಶೀಘ್ರದಲ್ಲೇ ‘ಸ್ವಚ್ಛತಾ ಸ್ವಾಭಿಮಾನ ಸಮಿತಿ’ ರಚಿಸಲು ಶಾಸಕದ್ವಯರ ಆಸಕ್ತಿ ತಾಳಿದ್ದಾರೆ.

    ಮಾನದಂಡ ಅಳವಡಿಕೆ: ಸಮಿತಿ ರಚಿಸಿ ಅದರ ಕಾರ್ಯ ವಿಧಾನ ಹಾಗೂ ಆಯ್ಕೆಯ ಮಾನದಂಡಗಳ ಕುರಿತು ಕರಪತ್ರ ಮುದ್ರಿಸಿ, ನಗರಾದ್ಯಂತ ವಿದೇಶಿ ಪ್ರವಾಸದ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ನಿರಂತರ 4 ತಿಂಗಳವರೆಗೆ ಕಡ್ಡಾಯವಾಗಿ ತಮ್ಮ ಗಲ್ಲಿಯಲ್ಲಿ ಸ್ವಚ್ಛತೆ ಕಾಪಾಡುವ ಬೆಳಗಾವಿಯ ದಕ್ಷಿಣ ಮತ್ತು ಉತ್ತರ ಮತಕ್ಷೇತ್ರದ ತಲಾ ಒಂದೊಂದು ಸಮಿತಿಯನ್ನು ವಿದೇಶಿ ಪ್ರವಾಸಕ್ಕೆ ಆಯ್ಕೆ ಮಾಡಲಾಗುವುದು. ಇದಕ್ಕಾಗಿ ಸಮಿತಿಯು ತನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾಡುತ್ತಿರುವ ಸ್ವಚ್ಛತೆಯ ನಿರ್ವಹಣೆಯನ್ನೇ ಮಾನದಂಡವನ್ನಾಗಿಸಿಕೊಂಡು ಹಲವು ವಿಭಾಗಗಳಿಗೆ ಸಂಬಂಧಿಸಿದಂತೆ ಅಂಕ ನಿಗದಿ ಪಡಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

    ಅಧಿಕಾರಿಗಳೊಂದಿಗೆ ಚರ್ಚೆ: ಶಾಸಕ ಅಭಯ ಪಾಟೀಲ ಈ ಕುರಿತು ಪಾಲಿಕೆಯ ಆರೋಗ್ಯ ವಿಭಾಗದ ಸದಸ್ಯರ ಜತೆ ಸಮಾಲೋಚನೆ ನಡೆಸಿ ‘ಸ್ವಚ್ಛತಾ ಸ್ವಾಭಿಮಾನ ಸಮಿತಿ’ಯ ಜವಾಬ್ದಾರಿಗಳೇನು? ಒಣ ಮತ್ತು ಹಸಿ ಕಸ ಎಂದು ವಿಂಗಡಿಸಿ ವಿಲೇವಾರಿ ಮಾಡುವ ಬಗ್ಗೆ ಸ್ಥಳೀಯರಿಗೆ ಅರಿವು ಮೂಡಿಸುವುದರ ಜತೆಗೆ ಬಡಾವಣೆಯಲ್ಲಿ ಹೇಗೆ ಸ್ವಚ್ಛತೆ ಕಾಪಾಡಬೇಕು ಎಂಬಿತ್ಯಾದಿ ಅಂಶ ಸೇರಿ ಸಮಿತಿಯ ಕಾರ್ಯವಿಧಾನ, ಯೋಜನೆಯ ರೂಪರೇಷೆ ರಚಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಚುನಾವಣೆ ಮುನ್ನ ಸಮಿತಿ ರಚನೆ?

    ಬೆಳಗಾವಿ ನಗರದ ಪ್ರತಿಯೊಂದು ಗಲ್ಲಿಯಲ್ಲಿ ಯುವಕಮಂಡಳ, ಮಹಿಳಾ ಮಂಡಳ ಹಾಗೂ ಗಲ್ಲಿಯ ಹಿರಿಯರನ್ನು ಸೇರಿಸಿ ‘ಸ್ವಚ್ಛತಾ ಸ್ವಾಭಿಮಾನ ಸಮಿತಿ’ ರಚಿಸಿ ಆಯಾ ಗಲ್ಲಿಯ ಸ್ವಚ್ಛತೆಯ ಕುರಿತು ನಿಗಾವಹಿಸುವ ಜವಾಬ್ದಾರಿ ನೀಡಲಿದ್ದಾರೆ. ಬೆಳಗಾವಿಯನ್ನು ಸುಂದರ ನಗರವನ್ನಾಗಿ ನಿರ್ವಹಣೆ ಮಾಡಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂಬುದನ್ನು ಮನಗಂಡ ಜನಪ್ರತಿನಿಧಿಗಳು, ಸ್ವಚ್ಛತೆಗಾಗಿ ವಿದೇಶಿ ಪ್ರವಾಸದ ಆಫರ್ ನೀಡುವ ಮೂಲಕ ಸ್ಥಳೀಯರನ್ನು ಹುರಿದುಂಬಿಸಲಿದ್ದಾರೆ. ಕೆಲವು ಪ್ರದೇಶದಲ್ಲಿ ಈ ಯೋಜನೆಯನ್ನು ಪಾಲಿಕೆ ಚುನಾವಣೆಗೂ ಮುನ್ನವೇ ಅನುಷ್ಠಾನಗೊಳಿಸಿದರೆ ಉತ್ತಮ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಸ್ಥಳೀಯರೂ ಸಹ ಶಾಸಕರ ಹೊಸ ಪ್ರಯತ್ನದ ಅನುಷ್ಠಾನಕ್ಕೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿ ನಗರದಲ್ಲಿ ಸ್ವಚ್ಛತೆ ಕಾಪಾಡುವಂತೆ ಈಗಾಗಲೇ ಹಲವು ವರ್ಷಗಳಿಂದ ನಿರಂತರ ಅರಿವು ಮೂಡಿಸಲಾಗಿದೆ. ಅದರ ಮುಂದುವರಿದ ಭಾಗವಾಗಿ ಸ್ವಚ್ಛತೆ ಕಾಪಾಡಲು ಆಡಳಿತ ವರ್ಗದ ಜತೆಗೆ ಸ್ಥಳೀಯರ ಪಾಲ್ಗೊಳ್ಳುವಿಕೆಯು ಮಹತ್ವದ ಪಾತ್ರ ವಹಿಸಬೇಕಾಗುತ್ತದೆ. ಹಾಗಾಗಿ ವಿದೇಶಿ ಪ್ರವಾಸ ಯೋಜನೆ ಜಾರಿಗೆ ತರುವ ಚಿಂತನೆ ನಡೆದಿದೆ.
    | ಅನಿಲ ಬೆನಕೆ ಬೆಳಗಾವಿ, ಉತ್ತರ ಮತಕ್ಷೇತ್ರದ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts