ರ‍್ಯಾಪರ್ ಗಲ್ಲಿಬಾಯ್

ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆ ನಿಭಾಯಿಸಿರುವ ‘ಗಲ್ಲಿ ಬಾಯ್’ ಚಿತ್ರದ ಟ್ರೇಲರ್ ಬುಧವಾರ ಬಿಡುಗಡೆಯಾಗಿದೆ. ‘ಸಿಂಬಾ’ ಚಿತ್ರಕ್ಕೂ ಮುನ್ನ ಸೆಟ್ಟೇರಿದ್ದ ‘ಗಲ್ಲಿ ಬಾಯ್’ ಚಿತ್ರಕ್ಕೆ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದಾರೆ. ಹಿಪ್​ಹಾಪ್ ಮತ್ತು ರ್ಯಾಪ್ ಹಾಡುಗಳನ್ನೇ ಮುಖ್ಯ ವಿಷಯವಸ್ತುವನ್ನಾಗಿಸಿಕೊಂಡ ನಿರ್ದೇಶಕರು, ಅದರ ಆಧಾರದ ಮೇಲೆ ಸಿನಿಮಾ ಮಾಡಿ ಮುಗಿಸಿದ್ದಾರೆ. ಮುಂಬೈನ ಸಾಧಾರಣ ಕುಟುಂಬದಿಂದ ಬಂದ ಕಥಾನಾಯಕ, ರ‍್ಯಾಪ್ ಹಾಡುಗಳ ಮೂಲಕ ಏನಾದರೂ ಸಾಧನೆ ಮಾಡಬೇಕೆಂದು ಕನಸು ಹೊತ್ತಿರುತ್ತಾನೆ. ಮನೆಯವರ ವಿರೋಧದ ನಡುವೆಯೇ ದೊಡ್ಡ ರ‍್ಯಾಪರ್ ಆಗಿ ಬೆಳೆಯಬೇಕು ಎಂದುಕೊಂಡಿರುತ್ತಾನೆ. ವರ್ಗ ವೈಷಮ್ಯದ ವಿಚಾರವಾಗಿ ಪ್ರತಿಸ್ಪರ್ಧಿಗಳಿಂದ ಹೀನಾಯ ಮುಖಭಂಗವನ್ನೂ ಅನುಭವಿಸುತ್ತಾನೆ. ಇದೆಲ್ಲವನ್ನು ದಾಟಿಕೊಂಡು ಆತ ತನ್ನ ಗುರಿ ತಲುಪುತ್ತಾನಾ? ಎಂಬುದೇ ‘ಗಲ್ಲಿ ಬಾಯ್’ ಚಿತ್ರದ ಎಳೆ. ‘ನನ್ನ ಟೈಮೂ ಬಂದೇ ಬರುತ್ತೇ’ ಎಂಬುದು ಸಿನಿಮಾದ ಟ್ಯಾಗ್​ಲೈನ್. ಅಂದಹಾಗೆ, ಮುಂಬೈ ಮೂಲದ ಖ್ಯಾತ ರ್ಯಾಪರ್ ಡಿವೈನ್ ಅವರ ಜೀವನದ ಕೆಲ ಅಂಶಗಳನ್ನಿಟ್ಟುಕೊಂಡು ಜೋಯಾ ಅಖ್ತರ್ ಸಿನಿಮಾ ಮಾಡಿದ್ದಾರೆ. ಆಲಿಯಾ ಭಟ್, ರಣವೀರ್​ಗೆ ಜೋಡಿಯಾಗಿದ್ದಾರೆ.

200 ಕೋಟಿ ಗಳಿಸಿದ ಸಿಂಬಾ!

ಬಿಡುಗಡೆಯಾದ 12 ದಿನದಲ್ಲಿ ರಣವೀರ್ ಸಿಂಗ್ ಮತ್ತು ಸಾರಾ ಅಲಿಖಾನ್ ನಟನೆಯ ‘ಸಿಂಬಾ’ 200 ಕೋಟಿ ರೂ. ಕ್ಲಬ್​ಗೆ ಸೇರ್ಪಡೆಗೊಂಡಿದೆ. ಮೊದಲ ದಿನ 20.72 ಕೋಟಿ ಗಳಿಕೆ ಮಾಡಿದ್ದ ‘ಸಿಂಬಾ’ ಮೂರೇ ದಿನದಲ್ಲಿ 75 ಕೋಟಿ ರೂ ಗಳಿಸಿತ್ತು. ಚಿತ್ರಕ್ಕೆ ರೋಹಿತ್ ಶೆಟ್ಟಿ ನಿರ್ದೇಶನವಿದೆ. -ಏಜೆನ್ಸೀಸ್