ಕೊಲ್ಲಿ ರಾಷ್ಟ್ರ ನೌಕರಿ ಕಹಿ

ಪ್ರಕಾಶ್ ಮಂಜೇಶ್ವರ ಮಂಗಳೂರು
ಮನೆ ಆಭರಣ ಅಡವಿಟ್ಟು, ಅಲ್ಲಿ-ಇಲ್ಲಿ ಸಾಲ ಮಾಡಿ ಏಜೆಂಟರ ಜೇಬು ತುಂಬಿಸಿ, ನೌಕರಿ ಕನಸಿನೊಂದಿಗೆ ವಿಮಾನ ಹತ್ತುವ ನಿರುದ್ಯೋಗಿಗಳಿಗೆ ಕೊಲ್ಲಿ ರಾಷ್ಟ್ರದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ ಎಂಬ ಸ್ಥಿತಿ ಬಂದೊದಗಿದೆ. ಹೀಗೆ ಸಮಸ್ಯೆಗೆ ಒಳಗಾದವರ ಪಟ್ಟಿಯನ್ನೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಬೆಚ್ಚಿಬೀಳುಸವ ಈ ಅಂಕಿಅಂಶಗಳು, ಸ್ಪಷ್ಟ ಎಚ್ಚರಿಕೆಯನ್ನೂ ನೀಡುತ್ತಿದೆ. ಹೀಗೆ ಕೆಲ ಕಾರಣಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಭಾರತೀಯರಿಗೆ ಕಹಿಯಾಗಿದೆ.
ಈ ವರ್ಷ 9,771 ಭಾರತೀಯ ಕಾರ್ಮಿಕರು ಕೊಲ್ಲಿ ರಾಷ್ಟ್ರದಲ್ಲಿ ತೊಂದರೆಗೆ ಸಿಲುಕಿದ್ದು, ಈ ಬಗ್ಗೆ ದೂರು ಕೂಡ ದಾಖಲಾಗಿವೆ. ಇದರಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗಿರುವುದು ಕುವೈತ್‌ನಲ್ಲಿ (2,377). ನಂತರದ ಸ್ಥಾನಗಳಲ್ಲಿ ಸೌದಿ ಅರೇಬಿಯಾ (2,244), ಒಮಾನ್(1,764), ಯುಎಇ(1,477), ಕತಾರ್ (1,459), ಬಹ್ರೇನ್ ಇವೆ.
ಅಧಿಕೃತ ಮಾಹಿತಿ ಪ್ರಕಾರ 2019, ಜೂನ್ 30ಕ್ಕೆ 5,804 ಭಾರತೀಯರು ಕೊಲ್ಲಿ ರಾಷ್ಟ್ರದಿಂದ ತಾಯ್ನಡಿಗೆ ವಾಪಾಸಾಗಲು ಅಲ್ಲಿನ ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ನಕಾರಾತ್ಮಕ ಅಂಶಗಳಿವು: ಕೊಲ್ಲಿ ರಾಷ್ಟ್ರಗಳಲ್ಲಿ ವೇತನ ಪಾವತಿ ವಿಷಯದಲ್ಲಿ ಕಾರ್ಮಿಕರು ತೊಂದರೆ ಎದುರಿಸಬೇಕಾಗಿದೆ. ಕಾರ್ಮಿಕರ ಹಕ್ಕುಗಳು ಪಾಲನೆ ಆಗುತ್ತಿಲ್ಲ. ವಸತಿ ವ್ಯವಸ್ಥೆ ನವೀಕರಣ ಆಗುತ್ತಿಲ್ಲ. ಹೆಚ್ಚುವರಿ ಕೆಲಸದ (ಓವರ್‌ಟೈಮ್)ವೇತನ ಸಿಗುತ್ತಿಲ್ಲ. ವೈದ್ಯಕೀಯ ಹಾಗೂ ವಿಮೆ, ಮರಣ ಸಂದರ್ಭ ಪರಿಹಾರ, ವಾರದ ರಜೆ ಸಿಗುವುದಿಲ್ಲ. ಕೆಲಸದ ಅವಧಿಯೂ ಹೆಚ್ಚು. ಕೆಲಸದ ಪ್ರದೇಶದಲ್ಲಿ ದೌರ್ಜನ್ಯ. ದಾಖಲಾಗಿರುವ ಪ್ರಕರಣಗಳಲ್ಲಿ ಹೀಗೆ ಹಲವು ರೀತಿಯ ಕಾರಣಗಳನ್ನು ಉಲ್ಲೇಖಿಸಲಾಗಿದೆ.

ಅಸಲಿ ಸಂಸ್ಥೆ ಪತ್ತೆ ಕಷ್ಟ: ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಒದಗಿಸುವ ಅಸಲಿ ಕಂಪನಿಗಳ ಪತ್ತೆ ತುಂಬ ಕಷ್ಟ. ಇನ್ನು ಅನೇಕ ಸಂದರ್ಭಗಳಲ್ಲಿ ಇಲ್ಲಿ ಏಜೆಂಟರು ತೋರಿಸುವ ಕಂಪನಿ ಒಂದು; ಅನ್ಯ ರಾಷ್ಟ್ರ ತಲುಪಿದ ಬಳಿಕ ಕೆಲಸಕ್ಕೆ ತೋರಿಸುವ ಕಂಪನಿಯೇ ಬೇರೆ. ಇತ್ತೀಚೆಗೆ ಮಂಗಳೂರಿನಿಂದ ತೆರಳಿ ಕುವೈತ್‌ನಲ್ಲಿ ತೊಂದರೆಗೆ ಸಿಲುಕಿದ ಕರಾವಳಿಯ 35 ಕಾರ್ಮಿಕರ ಅವಸ್ಥೆ ಇದೇ ಆಗಿತ್ತು.
ಕೊಲ್ಲಿ ರಾಷ್ಟ್ರಗಳಲ್ಲಿ ವ್ಯವಹಾರ ಸಮರ್ಪಕವಿಲ್ಲದೆ ಕಪ್ಪು ಪಟ್ಟಿಗೆ ಸೇರಿದ ಕಂಪನಿಗಳ ಪಟ್ಟಿಯನ್ನು ಸಂಬಂಧಪಟ್ಟ ದೇಶದ ಭಾರತೀಯ ರಾಯಭಾರಿ ಕಚೇರಿ ವೆಬ್‌ಸೈಟ್‌ನಲ್ಲಿ ನಾವು ಇರುವ ಪ್ರದೇಶದಿಂದಲೇ ಪತ್ತೆಹಚ್ಚಬಹುದು. ಆದರೆ ಮೋಸ ಮಾಡುವ ಒಂದು ಕಂಪನಿ ಮಾಲೀಕರು ತಮ್ಮ ಸಂಸ್ಥೆ ಕಪ್ಪು ಪಟ್ಟಿಗೆ ಬಿದ್ದ ಕೂಡಲೇ ಹೊಸ ಹೆಸರಿನಲ್ಲಿ ವ್ಯವಹಾರ ಶುರುವಿಟ್ಟುಕೊಳ್ಳುತ್ತಾರೆ ಎಂದು ಎಚ್ಚರಿಸುತ್ತಾರೆ ಅನಿವಾಸಿ ಭಾರತೀಯರು.

ಬದಲಾದ ಪರಿಸ್ಥಿತಿ: ಕರ್ನಾಟಕ ಮತ್ತು ಕೇರಳ ಕರಾವಳಿಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಕೊಲ್ಲಿ ರಾಷ್ಟ್ರಗಳ ಗಮನಾರ್ಹ ಕೊಡುಗೆ ಇದೆ. 1970-80ರ ದಶಕದಲ್ಲಿ ದಕ್ಷಿಣ ಕನ್ನಡ ಅಭಿವೃದ್ಧಿ ವಿಷಯದಲ್ಲಿ ಹಿಂದುಳಿದಿತ್ತು. ಇಲ್ಲಿನ ಜನರ ಸ್ಥಿತಿಗತಿ ಅಷ್ಟೇನೂ ಆಶಾದಾಯಕ ಆಗಿರಲಿಲ್ಲ. ಅದರಲ್ಲೂ ಮುಸ್ಲಿಮರ ಬದುಕು ಶೋಚನೀಯವಾಗಿತ್ತು. ಬಡತನ ಮತ್ತು ಶಿಕ್ಷಣದ ಮಹತ್ವದ ಅರಿವಿನ ಕೊರತೆ ಇತ್ತು. ಇಂತಹ ಸಂದರ್ಭ ಇಲ್ಲಿನ ಜನರು ಬದುಕು ಕಟ್ಟಿಕೊಳ್ಳಲು ದೊಡ್ಡ ಮಟ್ಟದಲ್ಲಿ ನೆರವಾಗಿರುವುದು ಕೊಲ್ಲಿ ರಾಷ್ಟ್ರಗಳ ಹಣ. ಗಲ್ಫ್‌ನಲ್ಲಿ ಕುಟುಂಬದ ಓರ್ವ ಸದಸ್ಯ ಉದ್ಯೋಗ ಗಿಟ್ಟಿಸಿದನೆಂದರೆ ಆ ಮನೆ ಉದ್ಧಾರವಾಯಿತು ಎಂದೇ ಅರ್ಥ ಎನ್ನುವ ಪರಿಸ್ಥಿತಿ ಇತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಕೊಲ್ಲಿ ರಾಷ್ಟ್ರಗಳು ಕೂಡ ತಮ್ಮ ದೇಶದ ಹೆಚ್ಚಿನ ಹುದ್ದೆಗಳನ್ನು ಸ್ವದೇಶಿಯರಿಗೆ ಮೀಸಲಿಡತೊಡಗಿವೆ.

 ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗ ಹುಡುಕುವವರು ಉದ್ಯೋಗಕ್ಕಾಗಿ ವೆಚ್ಚ ಮಾಡುವ ಮೊದಲೇ ಎಚ್ಚರ ವಹಿಸಬೇಕು. ತಮಗೆ ದೊರೆಯುವ ವೀಸ ಯಾವುದು? ಷರತ್ತುಗಳೇನು? ಎನ್ನುವ ಕುರಿತು ನಿಖರವಾಗಿ ತಿಳಿದುಕೊಳ್ಳಬೇಕು. ರಾಯಭಾರಿ ಕಚೇರಿ ವೆಬ್‌ಸೈಟ್ ಮೂಲಕ ಕೂಡ ಸಂಬಂಧಪಟ್ಟ ಕಂಪನಿ ಬಗ್ಗೆ ಮಾಹಿತಿ ಪಡೆಯಬಹುದು. ಈ ಕುರಿತು ಆಗಾಗ ಎದುರಾಗುವ ಸಮಸ್ಯೆ ತಪ್ಪಿಸಲು ಸರ್ಕಾರವೇ ಒಂದು ಸ್ಪಷ್ಟ ನೀತಿ ರೂಪಿಸುವುದು ಒಳಿತು.
ಮೋಹನ್‌ದಾಸ್ ಕಾಮತ್ ಅನಿವಾಸಿ ಭಾರತೀಯ ಇಂಜಿನಿಯರ್, ಕುವೈತ್

ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗ ಪಡೆಯುವ ಆತುರದಲ್ಲಿ ಭಾರತೀಯ ಯುವಜನರು ಮೋಸ ಹೋಗುತ್ತಿರುವು ಒಂದು ಸಾಮಾನ್ಯ ಸಂಗತಿ. ಸಂತ್ರಸ್ತರ ಒಂದು ದೊಡ್ಡ ಗುಂಪು ವೀಡಿಯೋ ಮೂಲಕ ತಮ್ಮ ಶಾಸಕರಿಗೆ ಕಳುಹಿಸಿದ ಸಂದೇಶ ವೈರಲ್ ಆಗಿರುವುದು ಮತ್ತು ಪ್ರಕರಣದ ಬಗ್ಗೆ ಮಾಧ್ಯಮಗಳು ಮಾಡಿದ ವರದಿಗಳಿಂದ ಇತ್ತೀಚೆಗೆ ಒಂದು ಸುದ್ದಿ ಮಾತ್ರ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಜನರೇ ಈ ವಿಷಯದಲ್ಲಿ ಜಾಗೃತರಾಗಬೇಕು.
-ವಿನೋದ್ ಅಂಬ್ಲಮೊಗರು ವಿಜ್ಞಾನಿ, ಕುವೈತ್

Leave a Reply

Your email address will not be published. Required fields are marked *