ರಜೆ ಮೇಲೆ ಬಂದಿದ್ದ ಯೋಧ ಸೇನೆಗೆ ವಾಪಸ್

ಗುಳೇದಗುಡ್ಡ: ಪಾಕ್‌ನೊಂದಿಗೆ ಯುದ್ಧ ಸಂಭವ ಹಿನ್ನೆಲೆ ಮೇಲಧಿಕಾರಿಗಳ ಕರೆಯ ಮೇರೆಗೆ ರಜೆ ಮೇಲೆ ಪಟ್ಟಣಕ್ಕೆ ಆಗಮಿಸಿದ್ದ ಯೋಧ ಅಂಬರೀಷ್ ಬಾಗಲಕೋಟೆ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸನ್ಮಾನಿಸಿ, ಶುಭಕೋರಿ ಶನಿವಾರ ಬೀಳ್ಕೊಟ್ಟರು. ಯೋಧನಿಗೆ ನೆನಪಿನ ಕಾಣಿಕೆ ನೀಡಿ, ಸಿಹಿ ತಿನ್ನಿಸಿ ಶುಭ ಹಾರೈಸಿದರು.

ಲಖನೌ ಮೂಲಕ ಜಮ್ಮುವಿಗೆ ತೆರಳಲು ಸಿದ್ಧನಾದ ಯೋಧ ಅಂಬರೀಷ್ ಅವರನ್ನು ಪಟ್ಟಣದ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರು, ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆ ಪರವಾಗಿ ಚೇರ್ಮನ್ ಅಶೋಕ ಹೆಗಡಿ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ಅಧ್ಯಕ್ಷ ಸಿ.ಎಂ. ಜೋಶಿ, ಸುರೇಶ ಸಾರಂಗಿ, ಮಲ್ಲಿಕಾರ್ಜುನ ಕಲಕೇರಿ ಸನ್ಮಾನಿಸಿ ಬೀಳ್ಕೊಟ್ಟರು.

ಮುಖಂಡ ಸಂಜಯ ಬರಗುಂಡಿ, ಜುಗಲಕಿಶೋರ ಭಟ್ಟಡ, ಶಿವನಯ್ಯ ಮಳ್ಳಿಮಠ, ಗೋಪಾಲ ಭಟ್ಟಡ, ನೀಲಕಂಠಯ್ಯ ಸಿಂದಗಿಮಠ, ಪುರಸಭೆ ಸದಸ್ಯ ಅಂಬರೀಷ್ ಕವಡಿಮಟ್ಟಿ, ರಮೇಶ ಅಗಸಿಮನಿ, ಬಾಬು ಬೊಂಬಲೇಕರ, ರಾಜು ಸಂಗಮ, ಹನುಮಂತ ಗೌಡರ, ವಿನೋದ ಗಾಜಿ, ವಿನಾಯಕ ಕಂಠಿ, ಪ್ರಕಾಶ ರೋಜಿ, ಸಾಗರ ಕೊಣ್ಣೂರ ಇತರರು ಇದ್ದರು.