ಮೃತರ ಕುಟುಂಬಕ್ಕೆ ಸಚಿವರ ಸಾಂತ್ವನ

ಗುಳೇದಗುಡ್ಡ: ಮುದ್ದೇಬಿಹಾಳ ತಾಲೂಕಿನ ಕಂದಗನೂರ ಗ್ರಾಮದ ಬಳಿ ಶನಿವಾರ ಸಂಭವಿಸಿದ್ದ ಅಪಘಾತದಲ್ಲಿ ಸಾವಿಗೀಡಾದ ಹಳದೂರ ಗ್ರಾಮದ ಮೃತರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭಾನುವಾರ ಸಾಂತ್ವನ ಹೇಳಿದರು.

ಅಪಘಾತದಲ್ಲಿ ಮೃತಪಟ್ಟ ಅಮೀನಸಾಬ ಸಾದನಿ, ಖಾಜಾಬಿ ಸಾದನಿ ಹಾಗೂ ಪಾರ್ವತೆವ್ವ ರಕ್ಕಸಗಿ (ರೋಣದ) ಅವರ ಶವವನ್ನು ಭಾನುವಾರ ಗ್ರಾಮಕ್ಕೆ ತಂದಾಗ ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿತ್ತು.
ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪಾಟೀಲ, ಮೃತರ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ ಒಂದು ಲಕ್ಷ ರೂ. ಹಾಗೂ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಒಂದು ಲಕ್ಷ ರೂ. ಸೇರಿ 2 ಲಕ್ಷ ರೂ. ಪರಿಹಾರ ನೀಡುತ್ತೇವೆ. ಗಾಯಗೊಂಡವರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದರು.

ಗ್ರಾಮಕ್ಕೆ ಭೇಟಿ ನೀಡಿದ ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಎ.ಎನ್. ದೇಸಾಯಿ, ಡಾ. ಬಸವರಾಜ ಹೆಬ್ಬಾಳ, ಪಿಎಸ್‌ಐ ರಾಕೇಶ ಬಗಲಿ, ಚನ್ನಪ್ಪ ಮೇಟಿ, ಪ್ರಕಾಶ ಮೇಟಿ, ಶೇಖರ ರಾಠೋಡ, ನಾಗಪ್ಪ ಕೆಂದೂರ, ವೀರಭದ್ರಪ್ಪ ಹುನಗುಂದ, ಸುರೇಶ ಕುರಿ ಇತರರಿದ್ದರು.

ಡಯಾಲಿಸಿಸ್ ಘಟಕ ತೆರೆದಿಲ್ಲವೇಕೆ
ಗುಳೇದಗುಡ್ಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳ ಹಿಂದೆಯೇ ಮೂರು ಡಯಾಲಿಸಿಸ್ ಘಟಕ ತೆರೆಯುವಂತೆ ಸೂಚಿಸಿದ್ದರೂ ಇದುವರೆಗೂ ಯಾಕೆ ತೆರೆದಿಲ್ಲ. ಈ ಬಗ್ಗೆ ನನಗೆ ವರದಿ ಕೊಡಿ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾ ಆರೋಗ್ಯಾಧಿಕಾರಿ ಎ.ಎನ್. ದೇಸಾಯಿ ಅವರಿಗೆ ಸೂಚಿಸಿದರು.
ಹಳದೂರು ಗ್ರಾಮಕ್ಕೆ ಆರೋಗ್ಯ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸುವುದಾಗಿ ಮೂರು ತಿಂಗಳ ಹಿಂದೆಯೇ ಆಶ್ವಾಸನೆ ನೀಡಿದ್ದೀರಿ. ಆದರೆ ಇದುವರೆಗೂ ಘಟಕಗಳನ್ನು ಪ್ರಾರಂಭ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದಾಗ ಸಚಿವರು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು.

ಆರ್‌ಒ ಸಿಸ್ಟಮ್ ತೊಂದರೆಯಿಂದಾಗಿ ಬಾಗಲಕೋಟೆಯ ಡಯಾಲಿಸಿಸ್ ಘಟಕವನ್ನು ಗುಳೇದಗುಡ್ಡಕ್ಕೆ ಸ್ಥಳಾಂತರಿಸುವುದು ತಡವಾಗಿದ್ದು, ಶೀಘ್ರ ಎರಡು ಘಟಕಗಳನ್ನು ಸ್ಥಳಾಂತರಿಸುವುದಾಗಿ ಸಚಿವರಿಗೆ ಡಿಎಚ್‌ಒ ಎ.ಎನ್. ದೇಸಾಯಿ ಸಮಜಾಯಿಷಿ ನೀಡಿದರು.

Leave a Reply

Your email address will not be published. Required fields are marked *