ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳುವುದೇ ಸವಾಲು

ಗುಳೇದಗುಡ್ಡ: ಪ್ರವಾಹದಿಂದಾದ ನಷ್ಟ, ಕಷ್ಟ ಎದುರಿಸಿ ಹೊಸ ಜೀವನ ಕಟ್ಟಿಕೊಳ್ಳುವ ದೊಡ್ಡ ಸವಾಲು ಆಸಂಗಿ, ಕಟಗಿನಹಳ್ಳಿ, ಲಾಯದಗುಂದಿ ಸಂತ್ರಸ್ತರ ಮುಂದಿದೆ. ಕಷ್ಟ ಪಟ್ಟು ಬೆಳೆದಿದ್ದ ಬೆಳೆಯೂ ಹಾಳಾಗಿದ್ದು, ಮನೆಯೂ ಕಳೆದುಕೊಂಡು ಅನಾಥರಾಗಿದ್ದಾರೆ.

ಪ್ರವಾಹದಿಂದ ನೀರು ಮನೆಯೊಳಗೆ ನುಗ್ಗಿದ್ದರಿಂದ ಮನೆಯಲ್ಲಿ 4-5 ಅಡಿಗಳಷ್ಟು ನೀರು ತುಂಬಿತ್ತು. ಈಗ ಮನೆಗಳಲ್ಲಿನ ಒಲೆಗಳು ಸಹ ಉರಿಯುತ್ತಿಲ್ಲ. ಅವರಿವರು ಕೊಟ್ಟಿದ್ದು ತಿನ್ನುತ್ತ ಪರಿಹಾರ ಕೇಂದ್ರದಲ್ಲಿ ಜೀವನ ಕಳೆಯುತ್ತಿದ್ದಾರೆ. ಹೀಗೆ ಆದರೆ ಮುಂದೆ ನಮ್ಮ ಜೀವನ ಹೇಗೆ? ಎಂಬ ಚಿಂತೆ ಪ್ರತಿಯೊಬ್ಬರನ್ನು ಕಾಡುತ್ತಿದೆ.

ಲಾಯದಗುಂದಿ, ಆಸಂಗಿ ಗ್ರಾಮಗಳ ಮನೆಗಳಲ್ಲಿ ಕೆಸರು ತುಂಬಿದ್ದು, ಮೂರ‌್ನಾಲ್ಕು ದಿನಗಳಿಂದ ಸ್ವಚ್ಛ ಮಾಡುವುದರಲ್ಲಿಯೇ ಜನರು ಹೈರಾಣಾಗಿದ್ದಾರೆ. ಮನೆಗಳ ಸ್ವಚ್ಛತೆ ಕೆಲಸಕ್ಕೆ ಮುಂದಾದ ಗ್ರಾಮಸ್ಥರಿಗೆ ಮನೆಗಳಲ್ಲಿ ಹಾವು, ಚೇಳುಗಳ ಸಹ ಕಾಣಿಸಿಕೊಂಡಿವೆ. ಸ್ವಚ್ಛ ಮಾಡಲು ಹೋದವರಿಗೆ ಅಲರ್ಜಿ ಸಮಸ್ಯೆ ಕಾಡುತ್ತಿದೆ. ಲಾಯದಗುಂದಿ ಗ್ರಾಮದಲ್ಲಂತೂ ಅನೇಕ ಮನೆಗಳು ಬಿದಿದ್ದು, ಮನೆ ರಾಡಿಯಿಂದ ಕೂಡಿದೆ. ಆಸಂಗಿ ಗ್ರಾಮದಲ್ಲಿನ ಎರಡು ಕುಟುಂಬದವರು ಆಡು, ಕುರಿ ಕಟ್ಟುವ ದಡ್ಡಿಯಲ್ಲಿ ಮಲಗುತ್ತಿದ್ದಾರೆ. ಕೆಲವರು ಸಂಬಂಧಿಕರ ಮನೆಯಲ್ಲಿ ಆಸರೆ ಪಡೆದರೆ, ಕೆಲವರು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.

ಲಾಯದಗುಂದಿ, ಅಲ್ಲೂರ, ಆಸಂಗಿ ಗ್ರಾಮಗಳಲ್ಲಿ ಅನೇಕ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಕೆಲವರ ಮನೆಗಳ ಮೇಲ್ಛಾವಣಿಗಳು ಕುಸಿದಿವೆ. ಇದರಿಂದ ಮನೆಗಳನ್ನು ಸ್ವಚ್ಛಗೊಳಿಸದೆ ಹಾಗೇ ಬಿಟ್ಟು ಸಂಬಂಧಿಕರ ಮನೆಗಳಲ್ಲಿ ಆಸರೆ ಪಡೆದಿದ್ದಾರೆ.

ಹಾಳಾದ ವಸ್ತುಗಳು
ಮನೆಗಳಲ್ಲಿನ ಎಲ್ಲ ವಸ್ತುಗಳು ಹಾಳಾಗಿವೆ. ಸಂತ್ರಸ್ತರ ಬದುಕು ನೀರು ಪಾಲಾಗಿದೆ. ಟಿವಿ, ಟ್ರೆಜರಿ, ಉರುವಲಿಗಾಗಿ ಸಂಗ್ರಹಿಸಿದ್ದ ಕಟ್ಟಿಗೆಗಳು ಸೇರಿ ಮನೆಯಲ್ಲಿನ ಅನೇಕ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಊರಿನಲ್ಲಿ ಎಲ್ಲೆಂದರಲ್ಲಿ ರಾಡಿ ನಿಂತು ಜ್ವರ, ಮೈ ಕೈ ನೋವು ಬಂದಾವು. ಒಲೆ ಹಚ್ಚಿ ಅಡಿಗೆ ಮಾಡಬೇಕಂದ್ರ ಆಗುತ್ತಿಲ್ಲ ಎಂದು ಆಸಂಗಿ ಗ್ರಾಮದ ಮಹಿಳೆಯರು ಅಳಲು ತೋಡಿಕೊಂಡರು.

ಬೋಟ್ ರೂಪದಲ್ಲಿ ದೇವರಿದ್ದ
ಪ್ರವಾಹದಲ್ಲಿ ಸಿಲುಕಿದ್ದ ನನ್ನ ಮತ್ತು ನಮ್ಮ ಅಕ್ಕನನ್ನು ರಕ್ಷಿಸುವುದು ನಮ್ಮ ಹೆತ್ತವರಿಗೆ ದೊಡ್ಡ ಚಿಂತೆಯಾಗಿತ್ತು. ಆ ದೇವರೇ ಬೋಟ್ ಮೂಲಕ ಬಂದನೇನೋ ಅನಿಸಿತು. ಅವರು (ಎನ್‌ಡಿಆರ್‌ಎಫ್) ಜೀವದ ಹಂಗು ತೋರೆದು ನಮ್ಮ ರಕ್ಷಿಸಿದರು. ಅವರಿದ್ದಲ್ಲಿಯೇ ನಮಗೆ ಧೈರ್ಯ ಬಂತು ಎನ್ನುತ್ತಾರೆ ಪ್ರವಾಹದಲ್ಲಿ ಸಿಲುಕಿದ್ದ ಗರ್ಭೀಣಿ ಅಕ್ಷತಾ ಹಿರೇಮಠ.

Leave a Reply

Your email address will not be published. Required fields are marked *