ಗದ್ದಿಗೌಡರ ನಾಲ್ಕನೇ ಬಾರಿ ಆಯ್ಕೆ ಖಚಿತ

ಗುಳೇದಗುಡ್ಡ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಪಮೈತ್ರಿಯಾಗಿದೆ. ದೇವೇಗೌಡ ಹಾಗೂ ಸಿದ್ದರಾಮಯ್ಯ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಂಡ್ಯ, ಹಾಸನ, ಮೈಸೂರು, ತುಮಕೂರುಗಳಲ್ಲಿ ಮಾತ್ರ ಜಂಟಿ ಪ್ರಚಾರ ಕೈಗೊಳ್ಳುತ್ತಿದ್ದಾರೆ ಹೊರತು ಬೇರೆ ಕಡೆಗಳಲ್ಲಿ ಇಲ್ಲ ಎಂದು ಬಿಜೆಪಿ ಮುಖಂಡ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಪಟ್ಟಣದ ಕರನಂದಿ ರಂಗಮಂದಿರದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶದ ಅನ್ನ ಉಂಡವರು ಹಿಂದುಸ್ತಾನ ಜಿಂದಾಬಾದ್ ಎನ್ನಬೇಕು. ಈ ದೇಶದ ಅನ್ನ ಉಂಡು ಪಾಕಿಸ್ತಾನ ಜಿಂದಾಬಾದ್ ಎನ್ನುವರರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದ ಅವರು, ನಮ್ಮ ಪಕ್ಷ ಜಾತಿ ನೋಡಿ ಟಿಕೆಟ್ ಕೊಡುವುದಿಲ್ಲ. ಅಭ್ಯರ್ಥಿಗಳ ಕೃತಿ ನೋಡಿ ಟಿಕೆಟ್ ಕೊಡುತ್ತದೆ. ಆದರೆ, ಕಾಂಗ್ರೆಸ್ ಜಾತಿ ನೋಡಿ ಟಿಕೆಟ್ ಕೊಡುತ್ತದೆ. ಧರ್ಮ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ ಪಕ್ಷ ಬಿಜೆಪಿ ಎಂದರು.

ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಪಿ.ಸಿ. ಗದ್ದಿಗೌಡರ ಈ ಬಾರಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿಯಾಗಲಿದ್ದಾರೆ ಎಂದರು. ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ. ಮಲ್ಲಿಕಾರ್ಜುನ ಬನ್ನಿ ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಘನಶ್ಯಾಮದಾಸ ರಾಠಿ, ತಾಲೂಕು ಅಧ್ಯಕ್ಷ ಶಾಂತಗೌಡ ಪಾಟೀಲ, ಜಿಪಂ ಸದಸ್ಯ ಆಸಂಗೆಪ್ಪ ನಕ್ಕರಗುಂದಿ, ಮಹಾಂತೇಶ ಮಮದಾಪುರ, ಕುಮಾರಗೌಡ ಜನಾಲಿ, ಜಿಲ್ಲಾ ಮಹಿಳಾಧ್ಯಕ್ಷೆ ಭಾಗ್ಯಾ ಉದ್ನೂರ, ನಗರ ಅಧ್ಯಕ್ಷ ದೀಪಕ ನೇಮದಿ, ಸಂತಪತ್ತಕುಮಾರ ರಾಠಿ, ರವಿಂದ್ರ ಪಟ್ಟಣಶೆಟ್ಟಿ, ಅಶೋಕ ಹೆಗಡೆ, ಪ್ರಶಾಂತ ಜವಳಿ, ಕಮಲಕಿಶೋರ ಮಾಲಪಾಣಿ, ವೀರಣ್ಣ ಹಳೆಗೌಡರ, ಸಿದ್ದು ಅರಕಾಲಚಿಟ್ಟಿ,ಸೇರಿದಂತೆ ಹಂಸನೂರು, ಕಟಗೇರಿ ಜಿಪಂ ವ್ಯಾಪ್ತಿಯ ಕಾರ್ಯಕರ್ತರು ಭಾಗವಹಿಸಿದ್ದರು.
ಮಹಿಳಾ ಕಾರ್ಯಕರ್ತರು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಿದರು.

ಹಿಂದು ಧರ್ಮವನ್ನು ಪೂಜಿಸುವೆ, ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನು ಸಮಾನವಾಗಿ ಕಾಣುತ್ತಾರೆ. ಇದಕ್ಕಾಗಿಯೇ ಮುಸ್ಲಿಂ ಹೆಣ್ಣು ಮಕ್ಕಳ ಮೇಲಾಗುವ ಅನ್ಯಾಯವನ್ನು ತಡೆಯಲು ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೆ ತಂದರು.
– ಕೆ.ಎಸ್. ಈಶ್ವರಪ್ಪ ಶಾಸಕ

ಹಲವು ಯೋಜನೆ ಜಾರಿ
ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ನಾನು ಕ್ಷೇತ್ರಕ್ಕೆ ಏನೂ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಕಾಲೇಜು ದಿನಗಳಿಂದಲೇ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಡಲು ರಾಜಕೀಯಕ್ಕೆ ಬಂದೆ. ಐದು ವರ್ಷದಲ್ಲಿ ಕ್ಷೇತ್ರಕ್ಕೆ ಬಾಗಲಕೋಟೆ ನಗರಕ್ಕೆ ಪಾಸ್‌ಪೋರ್ಟ್ ಆಫೀಸ್, ಹೈದರಾಬಾದ್-ಗೋವಾ ಹೆದ್ದಾರಿಯನ್ನು ಭಾರತ್ ಮಾಲಾ ಯೋಜನೆಯಲ್ಲಿ ಜೋಡಣೆ, ಹೆರಿಟೇಜ್ ಯೋಜನೆಯಡಿ ಬಾದಾಮಿಗೆ 50 ಕೋಟಿ ರೂ., ಅಮೃತ ಯೋಜನೆ, ಬಾಗಲಕೋಟೆಗೆ ಕುಡಿಯುವ ನೀರಿನ ಯೋಜನೆ ಸೇರಿ ಹಲವು ಯೋಜನೆಗಳನ್ನು ತಂದಿದ್ದೇನೆ ಎಂದು ಗದ್ದಿಗೌಡರ ಹೇಳಿದರು.