ಸಿಂಗಾಪುರ: ಭಾರತದ ಗ್ರಾಂಡ್ ಮಾಸ್ಟರ್ ಡಿ. ಗುಕೇಶ್ ಗೆಲುವಿಗಾಗಿ ಅತ್ಯುತ್ತಮ ಪ್ರಯತ್ನಗಳನ್ನು ನಡೆಸಿದ ಹೊರತಾಗಿಯೂ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧದ ವಿಶ್ವ ಚೆಸ್ ಚಾಂಪಿಯನ್ಷಿಪ್ನ 13ನೇ ಸುತ್ತಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಇದರಿಂದ ಉಭಯ ಆಟಗಾರರು 6.5-6.5 ಅಂಕಗಳ ಸಮಬಲ ಮುಂದುವರಿಸಿದ್ದಾರೆ. ಗುರುವಾರ 14ನೇ ಹಾಗೂ ಕೊನೇ ಸುತ್ತಿನ ಪಂದ್ಯ ನಡೆಯಲಿದ್ದು, ಇದರಲ್ಲಿ ಗೆದ್ದವರಿಗೆ ವಿಶ್ವ ಚಾಂಪಿಯನ್ ಪಟ್ಟ ಒಲಿಯಲಿದೆ. ಈ ಪಂದ್ಯವೂ ಡ್ರಾಗೊಂಡರೆ ಶುಕ್ರವಾರ ನಡೆಯಲಿರುವ ಟೈಬ್ರೇಕರ್ನಲ್ಲಿ ವಿಜೇತರ ನಿರ್ಧಾರವಾಗಲಿದೆ.
ಬುಧವಾರ ನಡೆದ ಪಂದ್ಯ ಸುದೀರ್ವಾಗಿ ಸಾಗಿ 68 ನಡೆಗಳ ಬಳಿಕ ಡ್ರಾಗೊಂಡಿತು. ಬಿಳಿಕಾಯಿಯೊಂದಿಗೆ ಆಡಿದ 18 ವರ್ಷದ ಗುಕೇಶ್ ಗೆಲುವಿಗಾಗಿ ದಿಟ್ಟ ಹೋರಾಟ ನಡೆಸಿದರೂ, 32 ವರ್ಷದ ಲಿರೆನ್ರ ರಕ್ಷಣಾತ್ಮಕ ಆಟದ ತಂತ್ರವನ್ನು ಬೇಧಿಸಲು ಸಾಧ್ಯವಾಗಲಿಲ್ಲ.
ಹಿಂದಿನ 2 ಗೆಲುವನ್ನು ಬಿಳಿ ಕಾಯಿಯಲ್ಲೇ ಕಂಡಿದ್ದ ಗುಕೇಶ್ ಕೊನೇ ಪಂದ್ಯವನ್ನು ಕಪ್ಪು ಕಾಯಿಯೊಂದಿಗೆ ಆಡಲಿದ್ದಾರೆ. ಹೀಗಾಗಿ ಬಿಳಿಕಾಯಿಯೊಂದಿಗೆ ಆಡಿದ ಟೂರ್ನಿಯ ತನ್ನ ಕೊನೇ ಪಂದ್ಯವನ್ನು ಗೆಲ್ಲಲು ಗುಕೇಶ್ ಭಾರಿ ತಂತ್ರಗಾರಿಕೆ ಪ್ರದರ್ಶಿಸಿದರು. ಆದರೆ ಲಿರೆನ್ ಯಾವುದಕ್ಕೂ ಬಗ್ಗದೆ ಅಂಕ ಹಂಚಿಕೊಂಡರು.
“ಪಂದ್ಯಗಳು ಕಡಿಮೆಯಾಗುತ್ತಿದ್ದಂತೆ ಅಪಾಯಗಳೂ ಹೆಚ್ಚುತ್ತವೆ. ನಾನು ಗೆಲುವಿಗಾಗಿಯೇ ಹೋರಾಟ ನಡೆಸಿದೆ. ನನ್ನ ಪಾಲಿಗೆ ಇದು ಮಹತ್ವದ ಪಂದ್ಯವಾಗಿತ್ತು. ಕೊನೇ ಪಂದ್ಯದಲ್ಲೂ ನನ್ನ ಅತ್ಯುತ್ತಮ ನಿರ್ವಹಣೆ ತೋರಲು ಪ್ರಯತ್ನಿಸುವೆ. ನಾನು ಇದುವರೆಗಿನ ಎಲ್ಲ ಪಂದ್ಯಗಳನ್ನು ಆನಂದಿಸಿರುವೆ. ಅಂತಿಮ ಫಲಿತಾಂಶ ಏನೇ ಆದರೂ ನಾನು ಅದನ್ನೂ ಆನಂದಿಸುವೆ’ ಎಂದು ಗುಕೇಶ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜಯ್ ಹಜಾರೆ ಟ್ರೋಫಿಗೆ ಕರ್ನಾಟಕ ತಂಡದಿಂದ ಮನೀಷ್ ಪಾಂಡೆಗೆ ಕೊಕ್; ಅನುಭವಿ ಬ್ಯಾಟರ್ಗೆ ಮುಚ್ಚಿದ ಬಾಗಿಲು!