‘ಪಬ್​ಜಿ’ ಗೀಳಿಗೆ ಬಿದ್ದ ವಿವಾಹಿತೆ: ಪತಿ, ಪಾಲಕರನ್ನು ತೊರೆಯುವ ಆಕೆಯ ನಿರ್ಧಾರದ ಹಿಂದಿದ್ದಾನೆ ನಿಗೂಢ ವ್ಯಕ್ತಿ

ಅಹಮದಾಬಾದ್​: ಕಡಿಮೆ ಅವಧಿಯಲ್ಲಿ ದೇಶದೆಲ್ಲೆಡೆ ಹವಾ ಸೃಷ್ಟಿಸಿರುವ ಆನ್​ಲೈನ್​ ಗೇಮ್​ ‘ಪಬ್​ಜಿ’ ಗೀಳಿಗೆ ಬಿದ್ದು, ಅನೇಕರು ತೊಂದರೆಗೀಡಾಗಿರುವುದನ್ನು ನೀವು ಸಾಕಷ್ಟು ಬಾರಿ ಕೇಳಿದ್ದೀರಾ, ಇದೀಗ 19 ವರ್ಷದ ವಿವಾಹಿತೆಯೊಬ್ಬಳು ಇದೇ ಗೇಮ್​ ಸಹವಾಸ ಮಾಡಿ ಗಂಡನಿಂದ ದೂರಾಗುವ ನಿರ್ಧಾರಕ್ಕೆ ಬಂದಿರುವುದಾಗಿ ವರದಿಯಾಗಿದೆ.

ಗುಜರಾತ್​ನ ಅಹಮದಾಬಾದ್​ ನಗರದ ನಿವಾಸಿಯಾಗಿರುವ 19 ವರ್ಷದ ವಿವಾಹಿತೆಗೆ ಒಂದು ವರ್ಷದ ಮಗುವಿದ್ದು, ಪಬ್​ಜಿ ಗೇಮ್​ಗೆ ವ್ಯಸನಕ್ಕೆ ಒಳಗಾಗಿರುವ ಆಕೆ ತನ್ನ ಗಂಡನಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾಳೆ. ತನ್ನ ತವರಿನಿಂದ ದೂರವಾಗಲು ನಿರ್ಧರಿಸಿರುವ ಆಕೆ ಉಚಿತ ಸಮಯದಲ್ಲಿ ತನ್ನ ಗೇಮ್​ ಪಾರ್ಟ್ನರ್​ನೊಂದಿಗೆ ಪಬ್​ಜಿಯಲ್ಲಿ ತೊಡಗಿಕೊಳ್ಳಲು ಈ ನಿರ್ಧಾರಕ್ಕೆ ಬಂದಿದ್ದಾಳೆ ಎನ್ನಲಾಗಿದೆ.

ಗುಜರಾತ್​ ರಾಜ್ಯದ ಅಭ್ಯಾಮ್​ ಮಹಿಳಾ ಸಹಾಯವಾಣಿ 181ಗೆ ಬಂದ ಕರೆಯಿಂದಾಗಿ ಪ್ರಕರಣ ಬೆಳಕಿಗೆ ಬಂದಿದ್ದು, ಗಂಡನಿಂದ ಡಿವೋರ್ಸ್​ ಪಡೆಯಲು ಸಹಾಯ ಮಾಡುವಂತೆ ವಿವಾಹಿತೆ ಕೇಳಿಕೊಂಡಿದ್ದಾಳೆ.

ಪ್ರಾರಂಭದಲ್ಲಿ ಡಿವೋರ್ಸ್​ ಬಗ್ಗೆ ಮಾತನಾಡದ ಆಕೆ ತನ್ನ ಗಂಡ ಹಾಗೂ ತವರು ಮನೆಯಿಂದ ದೂರವಾಗಿ ಮಹಿಳಾ ವೀಕ್ಷಣಾ ಗೃಹದಲ್ಲಿರುತ್ತೇನೆ ಎಂದು ಕೇಳಿಕೊಂಡಿದ್ದಾಳೆ. ವೀಕ್ಷಣಾ ಗೃಹಕ್ಕೆ ಒಮ್ಮೆ ಬಂದರೆ ಮಹಿಳಾ ರಕ್ಷಣಾ ದೃಷ್ಟಿಯಿಂದ ಮೊಬೈಲ್​ ಬಳಸುವಂತಿಲ್ಲ ಹಾಗೂ ಮನೆಯಿಂದ ಹೊರ ಹೋಗುವಂತಿಲ್ಲ ಎಂದು ಹೇಳಿದ್ದಕ್ಕೆ ಆಕೆ ತನ್ನ ಯೋಜನೆಯನ್ನು ಅಲ್ಲಿಯೇ ಕೈಬಿಟ್ಟು, ನಂತರ ಆಕೆಯ ಸ್ನೇಹಿತೆಯನ್ನು ಸಂಪರ್ಕಿಸಿದ್ದಾಳೆ. ಬಳಿಕ ಪಬ್​ಜಿ ಗೇಮ್​ ಆಡುವಾಗ ಪರಿಚಿತವಾದ ಗೇಮಿಂಗ್​ ಪಾರ್ಟ್ನರ್​ ಕಾರಣದಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಕೌನ್ಸೆಲಿಂಗ್​ನಲ್ಲಿ ಬಹಿರಂಗವಾಗಿದೆ ಎಂದು ಅಭ್ಯಾಮ್​ ಮಹಿಳಾ ಸಹಾಯವಾಣಿ ಕೇಂದ್ರದ ಸಂಯೋಜಕರಾದ ಫಲ್ಗುಣಿ ಪಟೇಲ್​ ತಿಳಿಸಿದ್ದಾರೆ.

ತನ್ನ ಪತ್ನಿ ಗೇಮ್​ ಗೀಳಿಗೆ ಒಳಾಗಿರುವುದು ಪತಿಗೆ ಇಷ್ಟವಿರಲಿಲ್ಲ. ಹೀಗಾಗಿ ಪತ್ನಿ ಗೇಮ್​ ಆಡುವುದಕ್ಕೆ ಅವಕಾಶ ನೀಡದಿದ್ದಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಬಳಿ ತನ್ನ ಗಂಡನನ್ನು ತೊರೆದು ತವರಿಗೆ ತೆರಳುವ ನಿರ್ಧಾರಕ್ಕೆ ಬಂದಳು. ಆದರೆ, ಪಾಲಕರು ಕೂಡ ಆಕೆಯ ಗೇಮ್​ ಗೀಳನ್ನು ವಿರೋಧಿಸಿ ಮೊಬೈಲ್​ ಕಸಿದುಕೊಳ್ಳಲು ಬಂದಾಗ ಅವರಿಂದಲೂ ದೂರವಾಗುವ ನಿರ್ಧಾರಕ್ಕೆ ಬಂದಿದ್ದಾಳೆ ಎಂದು ಫಲ್ಗುಣಿ ಪಟೇಲ್​ ಮಾಹಿತಿ ನೀಡಿದ್ದಾರೆ.

ವಿಡಿಯೋ ಗೇಮ್​ಗಾಗಿ ಇಂತಹದೊಂದು ದೊಡ್ಡ ನಿಲುವನ್ನು ತೆಗೆದುಕೊಳ್ಳುವುದು ಬೇಡ. ಅದರಲ್ಲೂ ಎರಡು ವರ್ಷದ ವೈವಾಹಿಕ ಜೀವನ ಹಾಗೂ ತನ್ನ ಮಗುವಿಗಾಗಿ ಗೇಮ್​ ತೊರೆದು ಬದುಕುವುದು ಸೂಕ್ತ ಎಂದು ಆಪ್ತ ಸಲಹೆಗಾರರು ಸಲಹೆ ನೀಡಿದ್ದು, ಭವಿಷ್ಯದ ಅನಿಶ್ಚಿತತೆ ಬಗ್ಗೆ ಆಕೆ ಅರ್ಥ ಮಾಡಿಕೊಂಡು ಒಳ್ಳೆಯ ನಿರ್ಧಾರಕ್ಕೆ ಬರುತ್ತಾಳೆ ಎಂದು ಸಲಹೆಗಾರರು ಖಚಿತಪಡಿಸಿರುವುದಾಗಿ ಫಲ್ಗುಣಿ ಪಟೇಲ್​ ತಿಳಿಸಿದ್ದಾರೆ.

ನಾಲ್ಕು ಗಂಟೆಗಳ ಕಾಲ ನಡೆದ ಕೌನ್ಸೆಲಿಂಗ್​ನಲ್ಲಿ ಪತಿಗೆ ಎರಡನೇ ಅವಕಾಶ ನೀಡುವಂತೆ ಸಲಹೆ ನೀಡಲಾಗಿದೆ. ಇದಕ್ಕೆ ಆಕೆಯು ಸಹ ಒಪ್ಪಿಕೊಂಡಿದ್ದಾಳೆ. ನಾವು ಅವಳಿಗಾಗಿ ಸಹಾಯವಾಣಿಯಲ್ಲಿ ವಿಶೇಷ ಗುರುತಿನ ಸಂಖ್ಯೆಯನ್ನು ನೀಡಿದ್ದೇವೆ. ಈ ಪ್ರಕರಣದ ಬಗ್ಗೆ ಸಾಕಷ್ಟು ಗಮನವಹಿಸಿದ್ದು, ಮತ್ತೆ ಇಂತಹ ನಿರ್ಧಾರ ತೆಗೆದುಕೊಳ್ಳದಂತೆ ಆಕೆಯ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದೇವೆ ಎಂದು ಫಲ್ಗುಣಿ ಪಟೇಲ್​ ಹೇಳಿದ್ದಾರೆ.

ಅಪಾಯಕಾರಿ ಗೇಮ್​ ಎನಿಸಿಕೊಂಡಿರುವ ಪಬ್​ಜಿ ಗೀಳಿನಿಂದ ಉಂಟಾದ ತೊಂದರೆಗಳ ಬಗ್ಗೆ ವರದಿಯಾಗುತ್ತಿದ್ದಂತೆ ನೇಪಾಳ, ಇರಾಕ್​ ಹಾಗೂ ಭಾರತದ ಕೆಲವು ಭಾಗಗಳಲ್ಲಿ ಪಬ್​ಜಿ ಅನ್ನು ಬ್ಯಾನ್​​ ಮಾಡಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *