ಅಹಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ಹಾಲಿ ರನ್ನರ್‌ಅಪ್ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-17ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಶುಭಮಾನ್ ಗಿಲ್ ಬಳಗ ಟೂರ್ನಿಯಲ್ಲಿ ಜಯದ ಹಳಿಗೇರುವ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್, ವೇಗಿ ಮೋಹಿತ್ ಶರ್ಮ (25ಕ್ಕೆ 3) ಬಿಗಿ ದಾಳಿಗೆ ನಲುಗಿ 8 ವಿಕೆಟ್‌ಗೆ 162 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಪ್ರತಿಯಾಗಿ ಇಂಪ್ಯಾಕ್ಟ್ ಆಟಗಾರ ಸಾಯಿ ಸುದರ್ಶನ್ (45) ಹಾಗೂ ಅನುಭವಿ ಬ್ಯಾಟರ್ ಡೇವಿಡ್ ಮಿಲ್ಲರ್ (44*) ಜತೆಯಾಟದ ಬಲದಿಂದ ಗುಜರಾತ್ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 168 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು.
ಮೋಹಿತ್ ಕಡಿವಾಣ: ಹಿಂದಿನ ಪಂದ್ಯದಲ್ಲಿ ರನ್‌ಪ್ರವಾಹ ಹರಿಸಿದ್ದ ಸನ್‌ರೈಸರ್ಸ್ ತಂಡ ಮತ್ತೊಮ್ಮೆ ಬೃಹತ್ ಮೊತ್ತ ದಾಖಲಿಸುವ ನಿಟ್ಟಿನಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಆದರೆ ಸನ್‌ರೈಸರ್ಸ್‌ಗೆ ಈ ಬಾರಿ ಟ್ರಾವಿಸ್ ಹೆಡ್ (19) ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ (16) ಸಾಧಾರಣ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 26 ಎಸೆತದಲ್ಲಿ 34 ರನ್‌ಗಳಿಸಿದರು. ಮಯಾಂಕ್ ಸತತ 3ನೇ ಪಂದ್ಯದಲ್ಲೂ ವೈಲ್ಯ ಅನುಭವಿಸಿದರು. ನಂತರ ಅಭಿಷೇಕ್ ಶರ್ಮ (19) , ಏಡನ್ ಮಾರ್ಕಮ್ (17) ದೊಡ್ಡ ಮೊತ್ತ ಪೇರಿಸುವಲ್ಲಿ ವಿಲರಾದರು. ಮಾರ್ಕ್ರಮ್ ಹಾಗೂ ಹೆನ್ರಿಕ್ ಕ್ಲಾಸೆನ್ (24) 4ನೇ ವಿಕೆಟ್‌ಗೆ 22 ಎಸೆತದಲ್ಲಿ 44 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು. ಉಮೇಶ್ ಯಾದವ್ ಈ ಜತೆಯಾಟ ಮುರಿದರು. ಕೊನೆಯಲ್ಲಿ ಶಾಬಾಜ್ ಅಹ್ಮದ್ (22) ಹಾಗೂ ಅಬ್ದುಲ್ ಸಮದ್ (29) ಮೊತ್ತ ಏರಿಸಿದರು. ಸ್ಲಾಗ್ ಓವರ್‌ಗಳಲ್ಲಿ ಮೋಹಿತ್ ಶರ್ಮ ಸನ್‌ರೈಸರ್ಸ್ ಬ್ಯಾಟರ್‌ಗಳಿಗೆ ಕಡಿವಾಣ ಹೇರಿದರು. ಅಂತಿಮ ಓವರ್‌ನಲ್ಲಿ 2 ವಿಕೆಟ್ ಕಿತ್ತು 3 ರನ್ ಮಾತ್ರ ನೀಡಿದರು. ಗುಜರಾತ್ ಪರ ಆ್ಘನ್‌ನ ಅಜ್ಮತ್ ಉಲ್ಲಾ ಒಮರ್ಜಾಯಿ, ರಶೀದ್ ಖಾನ್, ನೂರ್ ಅಹ್ಮದ್ ತಲಾ 1 ವಿಕೆಟ್ ಪಡೆದರು.