ಗೋದ್ರಾ ಹತ್ಯಾಕಾಂಡ: ಮೋದಿಗೆ ಕ್ಲಿನ್​ ಚಿಟ್​ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದಿನ ವರ್ಷಕ್ಕೆ

ನವದೆಹಲಿ: ಗುಜರಾತ್​ನಲ್ಲಿ 2002ರಲ್ಲಿ ನಡೆದಿದ್ದ ಹತ್ಯಾಕಾಂಡ ಪ್ರಕರಣದಲ್ಲಿ ನರೇಂದ್ರ ಮೋದಿಗೆ ವಿಶೇಷ ತನಿಖಾ ದಳ ನೀಡಿದ್ದ ಕ್ಲೀನ್​ ಚಿಟ್​ ಪ್ರಶ್ನಿಸಿದ್ದ ಜಾಕಿಯಾ ಜಫ್ರಿ ಅವರ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಮುಂದಿನ ವರ್ಷ ಜನವರಿಗೆ ಮುಂದೂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2002ರಲ್ಲಿ ಗುಜರಾತ್​ನ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಕೋಮು ಗಲಭೆಯ ಹತ್ಯಾಕಾಂಡದಲ್ಲಿ ಕಾಂಗ್ರೆಸ್​ ಸಂಸದ ಇಶಾನ್​ ಜಫ್ರಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಎಸ್​ಐಟಿ ಪ್ರಕರಣದಲ್ಲಿ ಮೋದಿ ಅವರ ಪಾತ್ರವನ್ನು ಅಲ್ಲಗೆಳೆದು, ಅವರಿಗೆ ಕ್ಲೀನ್​ ಚಿಟ್​ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಇಶಾನ್​ ಜಫ್ರಿ ಅವರ ಪತ್ನಿ ಜಾಕೀಯಾ ಜಫ್ರಿ, ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ನ. 13ರಂದು ಅರ್ಜಿ ವಿಚಾರಣೆಗೆ ಸಮ್ಮತಿಸಿದ್ದ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ ಎ.ಎಂ. ಕಾನ್ವೀಲ್​ಕರ್​ ಅವರಿದ್ದ ಪೀಠ ನ. 19ರಿಂದ ವಿಚಾರಣೆ ಆರಂಭಿಸಿದೆ.

ಇದರ ವಿಚಾರಣೆ ಸೋಮವಾರವೂ ನಡೆಯಿತು. ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲು ಸ್ವಲ್ಪ ಸಮಯ ಬೇಕಿದೆ ಎಂದು ಅರ್ಜಿದಾರರಾದ ಜಾಕಿಯಾ ಜಫ್ರಿ ಮತ್ತು ಮತ್ತೊಬ್ಬ ಅರ್ಜಿದಾರರಾದ ತೀಸ್ತಾ ಸೆಟಲ್ವಾಡಿಯಾ ಪರ ವಕೀಲರು ಪೀಠವನ್ನು ಕೋರಿದರು. ಈ ಹಿನ್ನೆಲೆಯಲ್ಲಿ ಕೋರ್ಟ್​ ಮುಂದಿನ ವಿಚಾರಣೆಯನ್ನು ಜನವರಿಗೆ ಮುಂದೂಡಿತು.

ಅರ್ಜಿದಾರರ ಪರ ವಾದ ಮಂಡಿಸಲು ಹಾಜರಾಗಿದ್ದ ಕಪಿಲ್​ ಸಿಬಲ್​ ಅವರು, ಹತ್ಯಾಕಾಂಡಕ್ಕೆ ಪ್ರೇರಣೆ ನೀಡಿದ್ದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಒದಗಿಸಲು ಸಮಯಬೇಕು ಎಂದು ಕೇಳಿದರು. ಕಪಿಲ್​ ಸಿಬಲ್​ ಅವರ ವಾದವನ್ನು ಸುಪ್ರೀಂಕೋರ್ಟ್​ ಮನ್ನಿಸಿತು.

ಗುಜರಾತ್​ ಹತ್ಯಾಕಾಂಡ: ಮೋದಿ ಕ್ಲೀನ್ ಚಿಟ್​ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ