ಮೋದಿಯವರು ಮತ ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಶಾಸಕನಿಗೆ ಚುನಾವಣಾ ಆಯೋಗದಿಂದ ನೋಟಿಸ್​

ದಹೋದ್, ಗುಜರಾತ್​​: ಪ್ರಧಾನಿ ಮೋದಿಯವರು ಮತದಾನ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದು, ನೀವು ಇವಿಎಂನಲ್ಲಿ ಬಿಜೆಪಿಗೆ ಮತಹಾಕಿದ್ದೀರೋ ಇಲ್ಲವೋ ಎಂಬುದು ತಿಳಿಯುತ್ತದೆ. ಒಮ್ಮೆ ನೀವು ಕಮಲಕ್ಕೆ ಮತ ಹಾಕದಿದ್ದರೆ ಮೋದಿಯವರು ನಿಮ್ಮ ಹಳ್ಳಿಗಳ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡುವುದಿಲ್ಲ ಎಂದು ಚುನಾವಣಾ ಪ್ರಚಾರದ ವೇಳೆ ಹೇಳಿದ್ದ ಗುಜರಾತ್​ ಬಿಜೆಪಿ ಶಾಸಕ ರಮೇಶ್​ ಕಟಾರಾ ಅವರಿಗೆ ಚುನಾವಣಾ ಆಯೋಗ ನೋಟಿಸ್​ ಜಾರಿ ಮಾಡಿದೆ.

ಎರಡು ದಿನಗಳ ಹಿಂದೆ ದಹೋದದ ಬಿಜೆಪಿ ಅಭ್ಯರ್ಥಿ ಜಸ್ವಂತ್​​ಸಿನ್​ ಭಾಭೋರ್​ ಪರ ಪ್ರಚಾರದ ವೇಳೆ ಕಟಾರಾ ಅವರು ಹೇಳಿದ್ದ ಈ ಮಾತುಗಳ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು.

ಗುಜರಾತ್​ನಲ್ಲಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ದಾಹೋದ್​ ಕೂಡ ಒಂದಾಗಿದೆ. ಗುಜರಾತ್​ ನಲ್ಲಿ ಒಟ್ಟು 26 ಸ್ಥಾನಗಳಿಗೆ ಏ.23ರಂದು ಚುನಾವಣೆ ನಡೆಯಲಿದೆ.

ಜಿಲ್ಲಾಧಿಕಾರಿ ಮತ್ತು ಚುನಾವಣಾ ಅಧಿಕಾರಿ ವಿ.ಕೆ.ಖರದಿ ಮಾಹಿತಿ ನೀಡಿದ್ದು, ರಮೇಶ್​ ಕಟಾರಾ ಅವರ ಹೇಳಿಕೆಯ ವಿಡಿಯೋವನ್ನು ಪರಿಶೀಲಿಸಲಾಗಿದ್ದು, ಇದಕ್ಕೆ ಇನ್ನೊಂದು ದಿನದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನಿಮ್ಮ ಬೂತ್​ಗಳಲ್ಲಿ ಕಡಿಮೆ ಮತದಾನವಾದರೆ ನಿಮ್ಮ ಕ್ಷೇತ್ರದಲ್ಲಿ ಕಡಿಮೆ ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ. ವೋಟಿಂಗ್​ ಕಾರ್ಡ್​, ಆಧಾರ್ ಕಾರ್ಡ್​, ಮತ್ತು ರೇಷನ್​ ಕಾರ್ಡ್​ಗಳಲ್ಲಿ ನಿಮ್ಮ ಭಾವಚಿತ್ರ ಇರುವುದರಿಂದ ಯಾರು ತಪ್ಪು ಮಾಡಿದ್ದಾರೆ ಎಂಬುದು ಮೋದಿಯವರಿಗೆ ಕುಳಿತಲ್ಲೇ ಗೊತ್ತಾಗಿಬಿಡುತ್ತದೆ ಎಂದು ಕೂಡ ರಮೇಶ್​ ಕಟಾರಾ ಅವರು ಪ್ರಚಾರದ ವೇಳೆ ಕ್ಷೇತ್ರದ ಜನರನ್ನು ಹೆದರಿಸಿದ್ದರು ಎನ್ನಲಾಗಿದೆ.

ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಟಾರಾ ಅವರು, ಇದೊಂದು ನಕಲಿ ವಿಡಿಯೋ, ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಲಾಗಿದೆ. ಮತದಾರರಿಗೆ ಬೆದರಿಕೆ ಹಾಕಿಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಜೆಪಿಯ ವಕ್ತಾರ ಪ್ರಶಾಂತ್​ ವಾಲಾ, ಬಿಜೆಪಿ ಇಂತಹ ಅಸಂಪ್ರದಾಯಿಕ ಪದಗಳ ಬಳಕೆಯನ್ನು ವಿರೋಧಿಸುತ್ತದೆ. ಹಾಗೂ ಯಾರೂ ಕೂಡ ಇಂತಹ ಪದಗಳನ್ನು ಬಳಸುವುದಿಲ್ಲ ಎಂದಿದ್ದಾರೆ.