ಗುಜರಾತ್ ಕೇಂದ್ರೀಕೃತ ಅಭಿವೃದ್ಧಿ ಬೇಡ;  ವಿಜಯವಾಣಿಯೊಂದಿಗೆ ಮಾತನಾಡಿದ ಭೈರಪ್ಪ

| ಪ್ರಕಾಶ ಎಸ್.ಶೇಟ್ ಹುಬ್ಬಳ್ಳಿ

‘ಸಮಗ್ರ ಭಾರತದ ಅಭಿವೃದ್ಧಿಯ ಬಗ್ಗೆ ಕೇಂದ್ರ ಸರ್ಕಾರ ಒತ್ತು ನೀಡಬೇಕಿದೆ. ಗುಜರಾತ್ ಕೇಂದ್ರೀಕೃತವಾಗಿ ಅಭಿವೃದ್ಧಿ ಆಗುತ್ತಿರುವಂತೆ ಕಾಣಿಸುತ್ತಿದೆ ಅಥವಾ ಉತ್ತರ ಭಾರತಕ್ಕೆ ಮಾತ್ರ ಪ್ರಾಶಸ್ಱ ಸಿಗುತ್ತಿದೆ. ಬಿಜೆಪಿಗೆ ಬಹುಮತ ಸಿಗದಿರಲು ಈ ಸಂಗತಿಯೂ ಪ್ರಮುಖ ಕಾರಣವಾಗಿದೆ. ಉತ್ತರದ ಪ್ರೀತಿ ದಕ್ಷಿಣಕ್ಕೂ ಸಿಗಬೇಕು, ಅಭಿವೃದ್ಧಿ ಸರ್ವವ್ಯಾಪಿ ಆಗಿರಬೇಕು’ ಎಂದು ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯಲ್ಲಿ ಸಾಹಿತ್ಯ ಪ್ರಕಾಶನದ ಎಂ.ಸುಬ್ರಮಣ್ಯ ಅವರ ಮನೆಯಲ್ಲಿ ಮಂಗಳವಾರ ಮುಂಜಾನೆಯ ಉಪಾಹಾರದೊಂದಿಗೆ ‘ವಿಜಯವಾಣಿ’ಯ ಜತೆಗೆ ಒಂದಿಷ್ಟು ವಿಚಾರಗಳ ಬಗ್ಗೆ ಎಸ್.ಎಲ್.ಭೈರಪ್ಪ ಅವರು ಮುಕ್ತವಾಗಿ ಮಾತನಾಡಿದರು. ಹುಬ್ಬಳ್ಳಿ- ಧಾರವಾಡದ ಒಡನಾಟ, ಪ್ರಸ್ತುತ ಸಾಹಿತ್ಯ ಚಟುವಟಿಕೆ, ಲೇಖಕರು, ಪ್ರಕಾಶಕರು ಹೇಗಿರಬೇಕು, ರಾಜಕೀಯ, ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದು, ಅವರ ಮಾತುಗಳಲ್ಲೇ ಇಲ್ಲಿ ವಿವರಿಸಲಾಗಿದೆ.

‘‘ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ತುಂಬ ಹೆಮ್ಮೆ ಇದೆ. ಮುಂದೆಯೂ ಇರುತ್ತದೆ ಎಂದು ಭಾವಿಸುತ್ತೇನೆ. ಗೌರವ ಕಡಿಮೆಯಾಗಬಾರದು ಎಂದಾದರೆ ಅವರ ಅಭಿವೃದ್ಧಿಯ ಚಿಂತನೆಗಳು ದೇಶವ್ಯಾಪಿಯಾಗಿರಬೇಕು. ಮೋದಿ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಪದ್ಮವಿಭೂಷಣ ಪ್ರಶಸ್ತಿ ಸಮಾರಂಭದಲ್ಲಿ ಅವರನ್ನು ಭೇಟಿಯಾಗಿ ಪರಿಚಯ ಮಾಡಿಕೊಂಡೆ. ‘ನಿಮ್ಮ ಬಗ್ಗೆ ಯಾರಿಗೆ ಗೊತ್ತಿಲ್ಲ, ನಿಮ್ಮ ಪರಿಚಯ ಏಕೆ ಮಾಡಿಕೊಳ್ಳುತ್ತೀರಿ’ ಎಂದು ಆತ್ಮೀಯವಾಗಿ ಬಿಗಿದಪ್ಪಿಕೊಂಡರು. ‘ಹೊಸ ಕಾದಂಬರಿ ಏನಾದರೂ ಬರೆಯುತ್ತಿದ್ದೀರಾ?’ ಎಂದು ಕೇಳಿದಾಗ, ನಾನು ಇತ್ತೀಚೆಗೆ ಬರೆಯುವುದನ್ನು ನಿಲ್ಲಿಸಿದ್ದೇನೆ ಎಂದಾಗ, ‘ಯಾವುದೇ ಕಾರಣಕ್ಕೂ ಬರೆಯುವುದನ್ನು ನಿಲ್ಲಿಸಬೇಡಿ, ನನ್ನಂತಹ ಲಕ್ಷಾಂತರ ನಿಮ್ಮ ಅಭಿಮಾನಿ ಓದುಗರಿಗೆ ನಿರಾಸೆಯಾಗುತ್ತದೆ, ಬರೆಯಿರಿ’ ಎಂದು ಹೇಳಿದ್ದರು. ನೀವು ಪ್ರಧಾನಿ ಆದಾಗಿನಿಂದ ದೇಶದ ಘನತೆ-ಗೌರವ ಹೆಚ್ಚಾಗಿದೆ. ದೇಶದ ಸಮಗ್ರ ಅಭಿವೃದ್ಧಿಯಾಗಬೇಕಿದೆ ಎಂದು ಅವರಿಗೆ ಹೇಳಿದ್ದೆ. ಆಗ ‘ಖಂಡಿತವಾಗಿಯೂ’ ಎಂದು ಪ್ರತಿಕ್ರಿಯಿಸಿದ್ದರು.

ಆದರೀಗ ನೋಡಿದಾಗ ಎಲ್ಲೋ ಗುಜರಾತ್ ಸೇರಿದಂತೆ ಉತ್ತರ ಭಾರತಕ್ಕೆ ಸಿಗುವಷ್ಟು ಆದ್ಯತೆ ದಕ್ಷಿಣದ ರಾಜ್ಯಗಳಿಗೆ ಸಿಗುತ್ತಿಲ್ಲ ಎಂದೆನಿಸುತ್ತದೆ. ಯಾವುದೇ ಕೈಗಾರಿಕೆ ಬಂದರೂ ಅದು ಗುಜರಾತ್​ಗೆ ಮಾತ್ರ ಏಕೆ? ಅನ್ಯ ರಾಜ್ಯಗಳಿಲ್ಲವೇ? ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕದಲ್ಲಿ ಸಾಕಷ್ಟು ಅವಕಾಶ, ಸಂಪತ್ತೂ ಇದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಕೈಗಾರಿಕೆಗಳು ಬರುತ್ತಿಲ್ಲ. ಉದ್ಯೋಗಸೃಷ್ಟಿಯಾದರೆ ಅರ್ಧ ಅಭಿವೃದ್ಧಿ ಆದಂತೆಯೇ. ದೇಶದ ಯಾವುದೋ ಒಂದು ರಾಜ್ಯದಲ್ಲಿ ಆದ ಪ್ರಗತಿಯನ್ನು ದೇಶದ ಪ್ರಗತಿ ಎನ್ನಲು ಬರುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ಮಾಡಬೇಕಿದೆ’’.

ಮೋದಿಯವರೇ ರಾಜಕೀಯ ನಿರ್ಧಾರ ತೆಗೆದುಕೊಳ್ಳಲಿ: ಬಿಜೆಪಿಯಲ್ಲಿ ಉದಯೋನ್ಮುಖ, ಸಕ್ಷಮ ನಾಯಕರಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಅರ್ಹರಿಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂಬುದು ಗೊತ್ತಾಯಿತು. ಯಾವುದೋ ಒತ್ತಡದ ಕಾರಣಕ್ಕೆ ಅರ್ಹರನ್ನು ಬದಿಗೊತ್ತಿ, ಅನರ್ಹರಿಗೆ ಅವಕಾಶ ಕಲ್ಪಿಸಿದ್ದು ಸರಿಯಲ್ಲ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಪರೋಕ್ಷವಾಗಿ ಲೋಕಸಭೆ ಚುನಾವಣೆಯ ವಿಚಾರವನ್ನು ಪ್ರಸ್ತಾಪಿಸಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಬಲ ಕುಸಿಯಲು ಕೇಂದ್ರದ ಮುಖಂಡರೊಬ್ಬರು ಹಸ್ತಕ್ಷೇಪ ಮಾಡಿದ್ದೇ ಕಾರಣ ಎನ್ನುವುದು ನನ್ನ ಗಮನಕ್ಕೆ ಬಂತು. ಈ ಎಲ್ಲ ಸಂಗತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರವಾಗಿ ಪರಿಗಣಿಸಬೇಕಿದೆ. ಮೋದಿ ಅವರು ಸೂಪರ್ ಪವರ್ ಇರುವ ನಾಯಕ ಎಂದು ನಾವು ನಂಬಿದ್ದೇವೆ. ಹೀಗಿರುವಾಗ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಕೆ ಏಕೆ? ದೇಶದ ವಿಚಾರ ಬಂದಾಗ ತಾವೇ ಸೂಕ್ತ ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಕನ್ನಡ ಲೇಖಕರು ಭಾಷಾ ಪರಿಧಿ ದಾಟಲಿ : ಕನ್ನಡದಲ್ಲಿ ಉತ್ತಮ ಲೇಖಕರಿಗೆ ಕೊರತೆಯಿಲ್ಲ. ಹಾಗಂತ ಕನ್ನಡ ಭಾಷೆಯಲ್ಲಿ ಮಾತ್ರ ಬರೆಯುವುದು, ಹಿಂದಿ, ಇಂಗ್ಲಿಷ್ ಸೇರಿದಂತೆ ಅನ್ಯ ಭಾಷೆಯಲ್ಲಿ ಬರೆಯುವುದಿಲ್ಲ ಎನ್ನುವ ಚೌಕಟ್ಟು ಹಾಕಿಕೊಳ್ಳುವುದು ಸರಿಯಲ್ಲ. ಈ ಪರಿಧಿಯಿಂದ ಹೊರ ಬಂದರೆ ಕನ್ನಡಿಗ ಲೇಖಕರು ವಿಶಾಲ ಜಗತ್ತಿಗೆ ತೆರೆದುಕೊಳ್ಳಲು ಸಾಧ್ಯ ಎನ್ನುವುದು ಭೈರಪ್ಪನವರ ಅಭಿಪ್ರಾಯ. ನೇಪಾಳಕ್ಕೆ ಹೋದಾಗ ಅಲ್ಲಿ ‘ಪರ್ವ’ ಕಾದಂಬರಿ ಮಾರಾಟಕ್ಕೆ ಇಟ್ಟಿದ್ದು ಕಂಡಿತು. ಅದು ಹಿಂದಿಯಲ್ಲಿ ತರ್ಜುಮೆ ಮಾಡಲಾಗಿತ್ತು. ನನಗೆ ಖುಷಿಯಾಯಿತು. ಬಹುಶಃ ಭಾಷಾ ಪರಿಧಿ ಹಾಕಿಕೊಂಡರೆ ಈ ಖುಷಿ ಸಿಗದು. ಲೇಖಕರು ಈ ಪರಿಧಿಯನ್ನು ದಾಟಿ ಬರೆಯಬೇಕು. ಕೆಲವರು ಹಿಂದಿ, ಇಂಗ್ಲಿಷ್ ಪುಸ್ತಕಗಳನ್ನೇ ಓದುವುದಿಲ್ಲ ಎನ್ನುವ ಕಟ್ಟುಪಾಡು ಹಾಕಿಕೊಂಡಿದ್ದಾರೆ. ಇದು ಸರಿಯಲ್ಲ. ಉತ್ತರ ಭಾರತಕ್ಕೆ ನಾವು ಕೇವಲ ಕನ್ನಡದ ಸಾಹಿತ್ಯ ಎಂದು ಮಾತನಾಡಲು ಆಗುತ್ತದೆಯೇ? ನಾವಲ್ಲಿ ಇಡೀ ಭಾರತದ ಸಾಹಿತ್ಯದ ಬಗ್ಗೆ ಮಾತನಾಡಬೇಕು. ವಿಶಾಲವಾಗಿ ಯೋಚಿಸಿ ಬೆಳೆಯುವ ಗುಣ ಅಳವಡಿಸಿಕೊಳ್ಳಬೇಕು. ಇದರಿಂದ ಕನ್ನಡಿಗ ಲೇಖಕರ ಹೆಸರೂ ವಿಶ್ವವ್ಯಾಪಿಯಾಗಿ ಬೆಳೆಯುತ್ತದೆ.

‘ಆವರಣ’ ಬರೆಯಲು ನಮಾಜ್ ಸಹ ಮಾಡಿದ್ದೇನೆ: ಲೇಖಕರು ಕುಳಿತಲ್ಲೇ ಮಾಹಿತಿ ಕಲೆ ಹಾಕಿ ಬರೆಯುವುದನ್ನು ನಿಲ್ಲಿಸಬೇಕು. ಹೀಗಾದರೆ ಉತ್ತಮ ಕೃತಿ ಹೊರಬರಲು ಸಾಧ್ಯವಿಲ್ಲ. ‘ಆವರಣ’ ಪುಸ್ತಕಕ್ಕಾಗಿ ನಾನು ದೇಶವ್ಯಾಪಿ ಪ್ರವಾಸ ಮಾಡಿದ್ದೇನೆ, ಅಧ್ಯಯನ ಮಾಡಿದ್ದೇನೆ. ಹಾಸನದಲ್ಲಿ ಪರಿಚಿತರೊಬ್ಬರ ಮನೆಯಲ್ಲಿ ಒಂದು ವಾರ ತಂಗಿದ್ದೆ. ಅಲ್ಲಿ ಸಾಕಷ್ಟು ಅಧ್ಯಯನ ಮಾಡಿದೆ. ಮಸೀದಿಗೂ ಹೋಗಿದ್ದೆ, ಅವರಂತೆ ನಮಾಜ್ ಸಹ ಮಾಡಿದ್ದೆ. ಧರ್ಮಗುರುಗಳ ಜತೆ ಸಾಕಷ್ಟು ಚರ್ಚೆ ಮಾಡಿದೆ. ಪರಿಪೂರ್ಣ ಅಧಿಕೃತ ಮಾಹಿತಿ ಸಿಕ್ಕಾಗಲೇ ‘ಆವರಣ’ ಬರೆಯಲು ಆರಂಭಿಸಿದೆ. ಈ ಕಾರಣಕ್ಕಾಗಿಯೇ ‘ಆವರಣ’ ಓದುಗರಿಗೆ ಇಷ್ಟವಾಯಿತು.

ಪ್ರಕಾಶಕರು ಪ್ರಾಮಾಣಿಕರಾಗಿದ್ದರೆ ಉತ್ತಮ: ಲೇಖಕರು ಮತ್ತು ಪ್ರಕಾಶಕರ ಸಂಬಂಧ ಉತ್ತಮವಾಗಿರಬೇಕು. ಅದರಲ್ಲೂ ಪ್ರಕಾಶಕರು ಪ್ರಾಮಾಣಿಕರಾಗಿರಬೇಕು. ಲೇಖಕರಿಗೆ ಸರಿಯಾದ ಲೆಕ್ಕ ಕೊಡಬೇಕು. ಅಂದಾಗ ಲೇಖಕ ಬದುಕಲು ಸಾಧ್ಯ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಈ ಸಂಬಂಧ ಪಾರದರ್ಶಕವಾಗಿರುವುದನ್ನು ಕಂಡಿದ್ದೇನೆ. ಉಳಿದೆಡೆ ಅಷ್ಟಕಷ್ಟೇ.

ಬದುಕು-ಬರಹ ಒಂದೇ ಆಗಿರಲಿ: ‘‘ಲೇಖಕರ ಬದುಕು ಮತ್ತು ಬರಹವೂ ಒಂದೇ ಆಗಿರಬೇಕು. ಕೆಲ ಲೇಖಕರು ತಮ್ಮ ಜೀವನದುದ್ದಕ್ಕೂ ‘ಸಮಾಜವಾದಿ’ ಎಂದು ಹೇಳಿಕೊಂಡಿದ್ದುಂಟು. ಹಿಂದು ದೇವರುಗಳನ್ನು ಸಾರ್ವಜನಿಕವಾಗಿ ನಿಂದಿಸಿ, ಹಿಂಬಾಗಿಲಿಂದ ದೇವಸ್ಥಾನಕ್ಕೆ ಹೋಗಿ ಕೈಮುಗಿದು ಬಂದಿದ್ದನ್ನೂ ನಾನು ಕಂಡಿದ್ದೇನೆ. ಸಾವಿನ ಬಳಿಕ ಇದೇ ಪದ್ಧತಿ ಪ್ರಕಾರ ಅಂತ್ಯಸಂಸ್ಕಾರ ನೆರವೇರಬೇಕು ಎಂದೋ ಅಥವಾ ಕೆ.ಜಿಗಟ್ಟಲೆ ಗಂಧದ ಕಟ್ಟಿಗೆಯಿಂದ ಶವಸಂಸ್ಕಾರ ನೆರವೇರಬೇಕು ಎನ್ನುವ ಇಚ್ಛೆಯನ್ನು ಮೊದಲೇ ವ್ಯಕ್ತಪಡಿಸಿದ್ದನ್ನೂ ಕಂಡಿದ್ದೇನೆ. ಹೀಗೆಲ್ಲ ಅಭಿಲಾಷೆ ಇರುವಾಗ ಸಮಾಜವಾದಿ ಎನ್ನುವ ಮುಖವಾಡವೇಕೆ?. ಬರೆದಂತೆ ಬದುಕಿದಾಗಲೇ ಲೇಖಕನಿಗೆ ನಿಜವಾದ ಗೌರವ’’ .

J&K assembly polls phase 1: ಜಮ್ಮು-ಕಾಶ್ಮೀರ ನಾಳೆ ಮೊದಲ ಹಂತದ ಚುನಾವಣೆ

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…